ಕಾಸರಗೋಡು: ಬೊಲೇರೊ ಜೀಪಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಕಿಲೋ ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ 30,000 ರೂ. ದಂಡ ವಿಧಿಸಿದೆ. ಕಣ್ಣೂರು ಮಟ್ಟನ್ನೂರಿನ ವಾಯಂತೋಡ್ ರಫ್ಶಾನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ರನೀಸ್ (36), ಮಟ್ಟನ್ನೂರು ಇಲ್ಲಮೂಲ ರುಮೈಸ ಮಂಜಿಲ್‌ನ ಮಹ್‌ರೂಫ್ (36) ಎಂಬಿವರಿಗೆ ಕಾಸರಗೋಡು ಅಡಿಶನಲ್ ಡಿಸ್ಟ್ರಿಕ್ಟ್ ಆಂಡ್ ಸೆಷನ್ಸ್ ನ್ಯಾಯಾಲಯ (ಎರಡು)ದ ನ್ಯಾಯಾಧೀಶೆ ಕೆ. ಪ್ರಿಯ ಈ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿಗಳು ಮೂರು ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ.
2020 ಆಗಸ್ಟ್ 1ರಂದು ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿಯ ಕರಂದಕ್ಕಾಡ್‌ನಲ್ಲಿ ಗಾಂಜಾ ವಶಪಡಿಸಲಾಗಿತ್ತು. ಕಣ್ಣೂರು ಭಾಗಕ್ಕೆ ತೆರಳುತ್ತಿದ್ದ ಜೀಪನ್ನು ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿತ್ತು. ಕಾಸರಗೋಡು ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಇ. ವಿನೋದ್ ಕುಮಾರ್, ಮಹಿಳಾ ಎಸ್‌ಐ ರೂಪಾ ಮಧುಸೂದನನ್ ಎಂಬಿವರ ನೇತೃತ್ವಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿತ್ತು. ಪ್ರಕರಣದ ಕುರಿತು ಕಾಸರಗೋಡು ಇನ್ಸ್‌ಪೆಕ್ಟರ್‌ಗಳಾಗಿದ್ದ ಪಿ. ರಾಜೇಶ್, ಪಿ. ಅಜಿತ್ ಕುಮಾರ್ ತನಿಖೆ ನಡೆಸಿದ್ದರು. ಪ್ರೋಸಿಕ್ಯೂಷನ್ ಪರವಾಗಿ ಅಡಿಷನಲ್ ಗವ. ಪ್ಲೀಡರ್ ಜಿ. ಚಂದ್ರಮೋಹನ್, ನ್ಯಾಯವಾದಿ ಚಿತ್ರಕಲ ಎಂಬಿವರು ಹಾಜರಾಗಿದ್ದರು.






