ಮಲಪ್ಪುರಂ: ಕರುವಾರಕುಂಡ್‌ನಿಂದ ನಾಪತ್ತೆಯಾದ ೧೪ರ ಹರೆಯದ ಬುಡಕಟ್ಟು ಜನಾಂಗದ ಬಾಲಕಿ ವಾಣಿಯಂಬಲಂ ತೊಡಿಕಪ್ಪುಳಂ ಪುಳ್ಳಿಪಾಡತ್ ಎಂಬಲ್ಲಿ ಪೊದೆಗಳೆಡೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಘಟನೆಯಲ್ಲಿ ನಿಗೂಢತೆ ಇದೆ ಎನ್ನಲಾಗಿದೆ. ಕರುವಾರಕುಂಡ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈ ಘಟನೆಯಲ್ಲಿ ಇದೇ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯನ್ನು ನಿನ್ನೆ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬಾಲಕಿಯ ಕೊಲೆಗೆ ಪ್ರೇಮ ವೈಫಲ್ಯ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.
ಪೊದೆಗಳೆಡೆಯಲ್ಲಿ ಬಾಲಕಿಯ ಬಟ್ಟೆಬರೆಯನ್ನು ಉಪಯೋಗಿಸಿ ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ದೌರ್ಜನ್ಯಗೈದ ಬಳಿಕ ಕೊಲೆಗೈದಿರುವುದಾಗಿ ಸೆರೆಯಾದ ವಿದ್ಯಾರ್ಥಿ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ಮಾಹಿತಿ ಲಭಿಸಿದೆ. ಬಾಲಕಿಯ ಬಟ್ಟೆಬರೆಗಳು ಅಡಕವಾದ ಶಾಲಾ ಬ್ಯಾಗ್, ಚಪ್ಪಲಿ ಪರಿಸರದಿಂದ ಪತ್ತೆಹಚ್ಚಲಾಗಿದೆ. ಕೊಲೆಗೆ ಬೇರೆ ಯಾರದಾದರೂ ಸಹಾಯ ಲಭಿಸಿದೆಯೋ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಕಳೆದ ಗುರುವಾರ ಬೆಳಿಗ್ಗೆ ಸಹೋದರಿಯ ಜೊತೆಗೆ ಶಾಲೆಗೆ ತೆರಳಿದ್ದ ಬಾಲಕಿ ಶಾಲೆಯ ಗೇಟ್‌ವರೆಗೆ ತಲುಪಿದ್ದರೂ ತರಗತಿಗೆ ಹಾಜರಾಗಿರಲಿಲ್ಲ. ಸಂಜೆ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಾಲೆಯ ಪ್ಲಸ್ ಟು ವಿದ್ಯಾರ್ಥಿಯೊಂದಿಗೆ ಸಂಪರ್ಕವಿದ್ದ ವಿಷಯವನ್ನು ಕೂಡಾ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಈ ಮಧ್ಯೆ ಸಂಜೆ 6 ಗಂಟೆಗೆ ಬಾಲಕಿ ಮನೆಗೆ ಕರೆ ಮಾಡಿ ಕೂಡಲೇ ತಲುಪುವುದಾಗಿ ತಿಳಿಸಿದ್ದರೂ ಬಳಿಕವೂ ಮನೆಗೆ ತಲುಪಿರಲಿಲ್ಲ. ಮೊಬೈಲ್ ಫೋನ್ ಲೊಕೇಶನ್ ಕೇಂದ್ರೀಕರಿಸಿ ಪೊಲೀಸರು ನಡೆಸಿದ ತನಿಖೆಯಲ್ಲಿ ಬಾಲಕಿ ಹಾಗೂ ಪ್ಲಸ್ ಟು ವಿದ್ಯಾರ್ಥಿ ತೊಡಿಗಾಪುಳಂ ರೈಲ್ವೇ ಸ್ಟೇಷನ್ ಪರಿಸರಕ್ಕೆ ತಲುಪಿರುವುದಾಗಿ ಪತ್ತೆಹಚ್ಚಿ ದ್ದರು. ಈ ಭಾಗದಲ್ಲಿ ಹುಡುಕಾಟ ತೀವ್ರಗೊಳಿಸಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಪ್ಲಸ್ ಟು ವಿದ್ಯಾರ್ಥಿಯನ್ನು ಕಸ್ಟಡಿಗೆ ತೆಗೆದು ವಿಚಾರಿಸಿದಾಗ ಮೃತದೇಹ ವಿದ್ದ ಸ್ಥಳದ ಬಗ್ಗೆ ಸೂಚನೆ ನೀಡಿದ್ದಾನೆ.







