ತಿರುವನಂತಪುರ: ಶಬರಿಮಲೆ ದೇಗುಲದ ನಾಲ್ಕು ಪಂಚಲೋಹ ವಿಗ್ರಹಗಳನ್ನು ಸಾಗಿಸಲು ಯತ್ನಿಸಿದ ಅಂತಾರಾಷ್ಟ್ರೀಯ ವಿಗ್ರಹ ಸಾಗಾಟ ಮಾಫಿಯಾ ತಂಡ ಅತೀವ ಶ್ರೀಮಂತ ದೇಗುಲವೆಂದೇ ಖ್ಯಾತಿ ಹೊಂದಿರುವ ತಿರುವನಂತಪುರದ ಶ್ರೀ ಪದ್ಮನಾಭ ಕ್ಷೇತ್ರದ ಪಂಚಲೋಹ ವಿಗ್ರಹಗಳನ್ನೂ ಸಾಗಿಸುವ ಯತ್ನ ನಡೆಸಿತ್ತೆಂದೂ ಇದಕ್ಕಾಗಿ ಆ ತಂಡದವರು ಹಣದೊಂದಿಗೆ ಈಗಲೂ ತಿರುವನಂತಪುರದಲ್ಲಿ ಸುತ್ತಾಡುತ್ತಿದ್ದಾರೆಂದು ದುಬೈಯ ಉದ್ಯಮಿ ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ.
ಶಬರಿಮಲೆ ಕ್ಷೇತ್ರದ ಚಿನ್ನ ಮಾತ್ರವಲ್ಲ ಅಲ್ಲಿನ ನಾಲ್ಕು ಪಂಚಲೋಹ ವಿಗ್ರಹಗಳನ್ನೂ ಸಾಗಿಸಲಾಗಿದೆ ಎಂದೂ ಇದರ ಹಿಂದೆ ತಮಿಳುನಾಡಿನ ಡಿ. ಮಣಿ ಎಂಬಾತ ಕಾರ್ಯ ವೆಸಗಿರುವುದಾಗಿಯೂ ಉದ್ಯಮಿ ವಿಶೇಷ ತಂಡಕ್ಕೆ ಮೊದಲು ಹೇಳಿಕೆ ನೀಡಿದ್ದರು. ಅದರಂತೆ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಈ ವ್ಯವಹಾರದ ಸೂತ್ರಧಾರನೆಂದು ಹೇಳಲಾಗುತ್ತಿರುವ ಡಿ. ಮಣಿಯನ್ನು ಚೆನ್ನೈಯಲ್ಲಿ ಪತ್ತೆಹಚ್ಚಿ ಆತನ ಹೇಳಿಕೆಯನ್ನೂ ದಾಖಲಿಸಿಕೊಂಡಿದೆ. ಡಿ. ಮಣಿಯ ನಿಜವಾದ ಹೆಸರು ಬಾಲಮುರುಗನ್ ಎಂದಾಗಿದೆ. ಈತನನ್ನು ಡೈಮಂಡ್ ಮಣಿ ಎಂದೂ ಕರೆಯಲಾಗುತ್ತಿದೆ. ಈತ ದಿಂಡಿಗಲ್ ನಿವಾಸಿಯಾಗಿದ್ದಾನೆ. ಈತ ಮತ್ತು ಈತನ ನೇತೃತ್ವದ ತಂಡ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ| ಜಯಲಲಿತರೊಂದಿಗೆ ನಂಟು ಹೊಂದಿರುವ ಓರ್ವ ವ್ಯಕ್ತಿಯನ್ನು ನನಗೆ ಪರಿಚಯಿ ಸಿದ್ದರೆಂದೂ ದುಬೈಯ ಉದ್ಯಮಿ ವಿಶೇಷ ತಂಡಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿ. ಮಣಿ ಮತ್ತು ಆತನ ನೇತೃತ್ವದ ತಂಡ ಕೇರಳದಲ್ಲಿ ಸಾವಿರ ಕೋಟಿ ರೂ.ಗಳ ಪಂಚಲೋಹ ವಿಗ್ರಹಗಳ ವ್ಯವಹಾರ ನಡೆಸುವ ಗುರಿ ಹಾಕಿಕೊಂಡಿದೆ. ಇದರಂತೆ ಹಲವು ವಿಗ್ರಹಗಳನ್ನು ಮಣಿ ಈಗಾಗಲೇ ಪಡೆದುಕೊಂಡಿದ್ದಾನೆ. ಚಿನ್ನ ಲೇಪನಗೈದ ಮೂರ್ತಿಗಳನ್ನು ಸಾಗಿಸಿ ಅದರಲ್ಲಿರುವ ಚಿನ್ನವನ್ನು ಕರಗಿಸಿ ತೆಗೆಯುವ ವ್ಯವಹಾರಕ್ಕಿಂತ ಪಂಚಲೋಹ ವಿಗ್ರಹಗಳನ್ನು ಸಾಗಿಸಿದ್ದಲ್ಲಿ ಅದಕ್ಕಿಂತಲೂ ಹೆಚ್ಚು ಲಾಭವುಂಟಾಗುತ್ತಿದೆ ಎಂದು ಉದ್ಯಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
೨೦೧೯-೨೦ನೇ ಅವಧಿಯಲ್ಲಿ ಇಂತಹ ನಾಲ್ಕು ಪಂಚಲೋಹ ವಿಗ್ರಹಗಳನ್ನು ಅಂತಾ ರಾಷ್ಟ್ರೀಯ ಪ್ರಾಚ್ಯವಸ್ತು ಸಾಗಾಟ ದಂಧೆಯವರಿಗೆ ಮಾರಾಟ ಮಾಡಲಾಗಿದೆ. ಈ ವಿಗ್ರಹಗಳನ್ನು ಡಿ. ಮಣಿ ಪಡೆದಿದ್ದನ. ಶಬರಿಮಲೆ ಚಿನ್ನ ಕಳವು ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತಿ ಇದಕ್ಕೆ ಮಧ್ಯವರ್ತಿಯ ಪಾತ್ರ ನಿರ್ವಹಿಸಿದ್ದನು. ಹೀಗೆ ವಿಗ್ರಹಗಳನ್ನು ನೀಡಿದ್ದು ಶಬರಿಮಲೆಯ ಆಡಳಿತದ ಹೊಣೆಗಾರಿಕೆ ಹೊಂದಿದ್ದ ಓರ್ವ ಗಣ್ಯವ್ಯಕ್ತಿಯಾ ಗಿದ್ದನು. 2020 ಅಕ್ಟೋಬರ್ 26ರಂದು ತಿರುವನಂತಪುರದಲ್ಲಿ ಇದರ ಹಣ ಹಸ್ತಾಂತರ ಪ್ರಕ್ರಿಯೆ ನಡೆದಿತ್ತು.
ಆಗ ಅಲ್ಲಿ ಡಿ. ಮಣಿ ಮತ್ತು ಉಣ್ಣಿ ಕೃಷ್ಣನ್ ಪೋತಿ ಮಾತ್ರವೇ ಇದ್ದರು. ಇದೆಲ್ಲಾ ನನಗೆ ಚೆನ್ನಾಗಿಯೇ ತಿಳಿದಿದೆ ಎಂದು ಉದ್ಯಮಿ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಈ ಹೇಳಿಕೆಯಲ್ಲಿ ಸತ್ಯಾಂಶ ಅಡಗಿದೆಯೇ ಎಂಬುದರ ಬಗ್ಗೆ ತನಿಖಾ ತಂಡ ಸಮಗ್ರವಾಗಿ ಪರಿಶೀಲಿ ಸತೊಡಗಿದೆ. ಆದರೆ ಈ ತನಕ ನಡೆಸಿದ ತನಿಖೆಯಲ್ಲಿ ಶಬರಿಮಲೆ ದೇಗುಲದಿಂದ ಯಾವುದೇ ಪಂಚಲೋಹ ವಿಗ್ರಹಗಳು ನಷ್ಟಗೊಂಡ ಬಗ್ಗೆ ಮಾಹಿತಿ ಲಭಿಸಿಲ್ಲ ವೆಂದು ತನಿಖಾ ತಂಡ ಹೇಳಿದೆ.







