ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ನಷ್ಟ ಪರಿಹಾರ ನೀಡದೆ ಅಥವಾ ಪುನರ್ವಸತಿ ಖಚಿತಪಡಿಸದೆ ಸ್ಥಳ ವಶಪಡಿಸಲಾಗಿದೆ ಎಂಬ ದೂರಿನಂತೆ ಕಾಸರಗೋಡು ಜಿಲ್ಲಾಧಿಕಾರಿ ಎರಡು ವಾರದೊಳಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿ ಮಾನವ ಹಕ್ಕು ಆಯೋಗ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ನಿರ್ದೇಶಿಸಿದ್ದಾರೆ. ಚೆಂಗಳ ತೆಕ್ಕಿಲ್‌ಫೆರಿ ನಿವಾಸಿಗಳಾದ ಸಿ.ಎಂ. ಮಿಸ್ರಿಯ, ಕೆ. ಕೌಲತ್ ಎಂಬಿವರು ಸಲ್ಲಿಸಿದ ದೂರಿನಲ್ಲಿ ಆಯೋಗ ಈ ನಿರ್ದೇಶ ಹೊರಡಿಸಿದೆ. ಹೈಕೋರ್ಟ್‌ನ ಆದೇಶವನ್ನು ಪರಿಗಣಿಸದೆ 2025 ಮಾರ್ಚ್ 22ರಂದು ಸ್ಪೆಷಲ್ ಡೆಪ್ಯುಟಿ ಕಲೆಕ್ಟರ್‌ರ ನೇತೃತ್ವದಲ್ಲಿ ಮನೆಗೆ ತಲುಪಿದ ಅಧಿಕಾರಿಗಳು ಕುಡಿಯುವ ನೀರಿನ ಪೈಪು, ಗೇಟ್, ಆವರಣಗೋಡೆಯನ್ನು ನಾಶಗೊಳಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಕಾನೂನು ಪ್ರಕಾರವಾಗಿಯೇ ಸ್ಥಳ ವಶಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಯೋಗಕ್ಕೆ ತಿಳಿಸಿದ್ದರು. ಮನೆಯನ್ನು ಅರ್ಧ ವಶಪಡಿಸಿಕೊಂಡರೆ ವಾಸಿಸಲು ಸಾಧ್ಯವಿಲ್ಲವೆಂದೂ, ಪೂರ್ಣವಾಗಿ ಪಡೆದುಕೊಳ್ಳಬೇಕೆಂದು ದೂರುಗಾರರು ಆಗ್ರಹಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಬಿಟ್ರೇಟರ್ ಆಗಿರುವ ಜಿಲ್ಲಾಧಿಕಾರಿಯಿಂದ ಆಯೋಗ ಸ್ಪಷ್ಟೀಕರಣ ಕೇಳಿದೆ.







