ತಂದೆಯ ಇರಿತಕ್ಕೆ ಬಲಿಯಾದ ಪುತ್ರಿ, ಸಂಬಂಧಿಕನ ಮೃತದೇಹ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ

ಮಂಜೇಶ್ವರ: ತೂಮಿನಾಡಿನಲ್ಲಿ ತಂದೆಯ ಇರಿತಕ್ಕೆ ಬಲಿಯಾದ ಪುತ್ರಿ ಹಾಗೂ ಸಂಬಂಧಿಕನ ಮೃತದೇಹಗಳನ್ನು ನಿನ್ನೆ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.

ತೂಮಿನಾಡು ಹಿಲ್‌ಟಾಪ್ ನಗರದ ಶೇಕುಂಞಿ 63) ಹಾಗೂ ಇವರ ಪತ್ನಿಯ ಸಹೋದರಿಯ ಪುತ್ರಿ ಮರಿಯಂ ಜುಮೈಲ (18) ಎಂಬಿವರ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ  ಹಿಲ್‌ಟಾಪ್ ನಗರದ ಮನೆಗೆ ತಲುಪಿಸುವಾಗ ನಾಡಿನ ವಿವಿಧೆಡೆಗಳಿಂದ ಸಂಬಂಧಿಕರ ಸಹಿತ ನೂರಾರು ಮಂದಿ ಅಲ್ಲಿ ಸೇರಿದ್ದು ಪ್ರತಿಯೊಬ್ಬರ ಮುಖದಲ್ಲೂ ದುಃಖ ಉಮ್ಮಳಿಸುತ್ತಿತ್ತು.  ಮೃತದೇಹಗಳನ್ನು ಮನೆಗೆ ತಲುಪಿಸಿ ಬಳಿಕ ಬಂಗ್ರಮಂಜೇಶ್ವರ ಪಾಂಡ್ಯಾಲ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. 

ಮೊನ್ನೆ ಸಂಜೆ ತೂಮಿನಾಡು ಹಿಲ್ ಟಾಪ್‌ನಗರದಲ್ಲಿರುವ ಶೇಕುಂಞಿಯವರ ಮನೆಯಲ್ಲಿ  ಭೀಕರ ಕೃತ್ಯ ನಡೆದಿತ್ತು. ಕೌಟುಂಬಿಕ ಸಮಸ್ಯೆ ಹಾಗೂ ಸೊತ್ತು ತರ್ಕದ ಹೆಸರಲ್ಲಿ ಮೂಲತಃ ಕರ್ನಾಟಕ ನಿವಾಸಿಯಾದ ಉಮ್ಮರ್ ಫಾರೂಕ್ ಈ ಕೃತ್ಯವೆಸಗಿದ್ದಾನೆನ್ನಲಾಗಿದೆ. ಉಮ್ಮರ್ ಫಾರೂಕ್‌ನ ಪತ್ನಿ ತಾಹಿರ ಹಾಗೂ ಪುತ್ರಿ ಮರಿಯಂ ಜುಮೈಲ ಹಿಲ್‌ಟಾಪ್‌ನಗರದ ಶೇಕುಂಞಿಯ ಮನೆಯಲ್ಲಿ ವಾಸಿಸುತ್ತಿ ದ್ದರು.  ಉಮ್ಮರ್ ಫಾರೂಕ್ ಹಾಗೂ ಪತ್ನಿ ತಾಹಿರ ಮಧ್ಯೆ ದಾಂಪತ್ಯ ಸಮಸ್ಯೆಗಳಿದ್ದು, ಅದನ್ನು ಮಾತುಕತೆ ಮೂಲಕ ಬಗೆಹರಿಸಲು ಉಮ್ಮರ್ ಫಾರೂಕ್ ಹಾಗೂ ಸಂಬಂಧಿಕರು ಶೇಕುಂಞಿಯ ಮನೆಗೆ ಬಂದಿದ್ದರು. ದಾಂಪತ್ಯ ಸಂಬಂಧ ತೊರೆಯುವ ನಿಲುವನ್ನು ತಾಹಿರ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಸಂಬಂಧ ಕೊನೆಗೊಳಿಸುವುದಾದಲ್ಲಿ ಪತ್ನಿಯ ಹೆಸರಲ್ಲಿ ಬರೆದುಕೊಟ್ಟ ತನ್ನ ಸೊತ್ತನ್ನು ಮರಳಿ ನೀಡಬೇಕೆಂದು ಉಮ್ಮರ್ ಫಾರೂಕ್ ತಿಳಿಸಿದ್ದನು. ಆದರೆ ಸೊತ್ತನ್ನು ಮರಳಿ ನೀಡಲಾಗದೆಂದೂ ಅದು ಮಗಳ ಶಿಕ್ಷಣ ಮತ್ತಿತರ ಅಗತ್ಯಗಳಿಗೆ ಬೇಕೆಂಬ ನಿಲುವನ್ನು ಶೇಕುಂಞಿ ತಿಳಿಸಿದ್ದರು. ಇದರಿಂದ ಕುಪಿತನಾದ ಉಮ್ಮರ್ ಫಾರೂಕ್ ಕೈವಶವಿರಿಸಿಕೊಂಡಿದ್ದ ಚಾಕುವಿನಿಂದ ಶೇಕುಂಞಿಗೆ ಇರಿದಿದ್ದಾನೆ. ಅದನ್ನು ತಡೆಯಲೆತ್ನಿಸಿದ ಮರಿಯಂ ಜುಮೈಲಳ ಕುತ್ತಿಗೆ ಹಾಗೂ ಹೊಟ್ಟೆಗೆ ಇರಿತವುಂ ಟಾಗಿದೆ. ಇರಿತದಿಂದ ಗಂಭೀರ ಗಾಯಗೊಂಡಿದ್ದ ಅವರಿಬ್ಬರನ್ನೂ ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜುಮೈಲಳ ಜೀವ ರಕ್ಷಿಸಲಾಗಲಿಲ್ಲ.

ಇದೇ ವೇಳೆ ಬಲದ ಕಾಲಿಗೆ ಇರಿತದಿಂದ ಗಾಯಗೊಂಡು ತೀವ್ರ ಅಸ್ವಸ್ಥಗೊಂಡಿದ್ದ ಶೇಕುಂಞಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದರೂ ನಿನ್ನೆ ಬೆಳಿಗ್ಗೆ ಅವರೂ ಸಾವಿಗೀಡಾಗಿದ್ದರು. ಸ್ವಂತ ತಂದೆಯೇ ಮುದ್ದಿನ ಮಗಳನ್ನು ಹಾಗೂ ಸಂಬಂಧಿಕನನ್ನು ಇರಿದು ಕೊಲೆಗೈದ ಘಟನೆಯ ಶೋಕ ನಾಡಿನಲ್ಲಿ ಇದೀಗಲೂ ಮಡುಗಟ್ಟಿನಿಂತಿದೆ.  ಇದೇ ವೇಳೆ ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಬಂಧಿಸಿದ ಆರೋಪಿ ಉಮ್ಮರ್ ಫಾರೂಕ್‌ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗೊಳ ಪಡಿಸಲು ಹಾಗೂ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸಲಿರುವ ಹಿನ್ನೆಲೆಯಲ್ಲಿ  ಆತನನ್ನು ಕಸ್ಟಡಿಗೆ ತೆಗೆಯಲು ಅರ್ಜಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಇದೇ ವೇಳೆ ಆರೋಪಿ ಉಮ್ಮರ್ ಫಾರೂಕ್ ಮಂಗಳೂರು ಬಜ್ಪೆ ಪೊಲೀಸ್ ಠಾಣೆಯಲ್ಲಿ ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ  ಗಲ್ಫ್‌ನಿಂದ ಮರಳಿ ತಲುಪಿದ ಈತನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಡೆದು ನಿಲ್ಲಿಸಿ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದರು. 40 ದಿನಗಳ ಕಾಲ ರಿಮಾಂಡ್‌ನಲ್ಲಿದ್ದ ಉಮ್ಮರ್ ಫಾರೂಕ್ ಇತ್ತೀಚೆಗೆಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page