ಕಾಸರಗೋಡು: ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಅತಿಕ್ರಮಣಕ್ಕೆ ಯಾವುದೇ ಕಾರಣದಿಂದಲೂ ಅನುಮತಿ ನೀಡುವುದಿಲ್ಲವೆಂದು ನಗರಸಭೆ ಹಾಗೂ ಜನಪ್ರತಿನಿಧಿಗಳು ಪುನರಾವರ್ತಿಸುತ್ತಿರುವ ಮಧ್ಯೆ ಇದೇ ಪ್ರದೇಶದ ರಸ್ತೆ ಬದಿಗಳಲ್ಲಿ ಬೀದಿ ವ್ಯಾಪಾರಿಗಳ ಭರಾಟೆ ವ್ಯಾಪಕವಾಗುತ್ತಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದ ಹಾಗೂ ಕಾಸರಗೋಡು ನರ್ಸಿಂಗ್ ಹೋಂನ ಮಧ್ಯೆ ಗೂಡಂಗಡಿಗಳು ತಲೆಯೆತ್ತುತ್ತಿವೆ. ನಗರಸಭೆ ಅಧಿಕಾರಿಗಳು ಅಥವಾ ನೌಕರರು, ವಾರ್ಡ್ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳು ಈ ಭಾಗಕ್ಕೆ ದೃಷ್ಟಿಹರಿಸುತ್ತಿಲ್ಲವೆಂದು ಹೇಳ ಲಾಗುತ್ತಿದೆ. ನಗರಸಭೆ ಆಡಳಿತಾಧಿ ಕಾರಿಗಳು ಕಚೇರಿಯಲ್ಲಿ ಕುಳಿತು ನಗರಸಭಾ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಕಾಸರಗೋಡು ನಗರದಲ್ಲಿ ರಸ್ತೆ ಕೈವಶಕ್ಕೆ ಅವಕಾಶವೇ ನೀಡುವುದಿಲ್ಲವೆಂದು ಪುನರಾವರ್ತಿಸುತ್ತಲೇ ಇದ್ದಾರೆ. ಆದರೆ ರಸ್ತೆ ಬದಿಯನ್ನು ಕೈವಶಪಡಿಸು ವವರಿಂದಾಗಿ ಪ್ರಯಾಣಿಕರು ಹಾಗೂ ವಾಹನ ಸಂಚಾರಕ್ಕೆ ಸವಾಲಾಗುತ್ತಿದೆ.
ಇದೇ ವೇಳೆ ಸಕಲ ಕಾನೂನು ವ್ಯವಸ್ಥೆಗಳನ್ನು ಉಲ್ಲಂಘಿಸಿರುವ ರಸ್ತೆ ಕೈವಶ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾಸರಗೋಡು ನಗರ, ವಿವಿಧ ಭಾಗಗಳಲ್ಲಿ ಈ ರೀತಿ ಕೈವಶ ನಡೆಸಲಾಗುತ್ತಿದೆ. ಈ ರೀತಿಯ ಗೂಡಂಗಡಿಗಳಲ್ಲಿ ವ್ಯಾಪಾರ ನಡೆಸುತ್ತಿರುವವರು ಅಧಿಕ ದರ ವಸೂಲಿ ಮಾಡಿ ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿದೆ. ಆಹಾರ ಸಾಮಗ್ರಿಗಳನ್ನು ಶುಚಿತ್ವವಿಲ್ಲದೆ ವಿತರಿಸಲಾಗುತ್ತಿದೆ ಎಂದು ದೂರಲಾಗಿದೆ.
ಇದೇ ರೀತಿಯಲ್ಲಿ ಹಳೆ ಬಸ್ ನಿಲ್ದಾಣ ಪರಿಸರದ ಎಂ.ಜಿ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿ ದ್ದವರಿಗೆ ಪುನರ್ವಸತಿ ನಿರ್ಮಿಸಿ ಹೊಸ ಬಸ್ ನಿಲ್ದಾಣದಲ್ಲಿ ಕೊಠಡಿಗಳನ್ನು ನೀಡಲಾಗಿತ್ತು. ಆದರೆ ಅದೆಲ್ಲ ಈಗ ಮುಚ್ಚಿದ ಸ್ಥಿತಿಯಲ್ಲಿದೆ. ಎಂ.ಜಿ ರಸ್ತೆಯಿಂದ ಸ್ಥಳಾಂತರಿಸಿದವರು ಹಾಗೂ ಅವರ ಜೊತೆ ಹೊಸದಾಗಿ ಸೇರಿಕೊಂಡವರು ಕೂಡಾ ರಸ್ತೆ ಕೈವಶಪಡಿಸುತ್ತಿದ್ದಾರೆ ಎಂಬ ದೂರಿದೆ.







