ಬದಿಯಡ್ಕ: ಮಾರ್ಪನಡ್ಕದಲ್ಲಿ ಯುವಕನನ್ನು ಇರಿದು ಕೊಲೆಗೈಯ್ಯಲು ಬಳಸಿದ ಚಾಕುವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಿನ್ನೆ ಆರೋಪಿಗಳನ್ನು ಸೇರಿಸಿಕೊಂಡು ಕರ್ನಾಟಕದ ಪುತ್ತೂರು ಬಳಿಯ ಇರ್ದೆ ಹೊಳೆಯಲ್ಲಿ ನಡೆಸಿದ ಶೋಧ ವೇಳೆ ಚಾಕು ಪತ್ತೆಯಾಗಿದೆ. ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣನ್‌ರ ನೇತೃತ್ವದಲ್ಲಿ ಆರೋಪಿಗಳಾದ ಕುಂಬ್ಡಾಜೆ ಮೈಲ್ತೊಟ್ಟಿಯ ಕಿರಣ್ (30), ಕರುವತ್ತಡ್ಕದ ಅಖಿಲೇಶ್ (25) ಎಂಬಿವರನ್ನು ಕರೆದೊಯ್ದು ನಡೆಸಿದ ಶೋಧ ವೇಳೆ ನೀರಿಲ್ಲದ ಹೊಳೆಯಲ್ಲಿ ಚಾಕು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆರೋಪಿಗಳನ್ನು ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈವೇಳೆ ಅವರಿಗೆ ರಿಮಾಂಡ್ ವಿಧಿಸಲಾಗಿದೆ.
ಮಾರ್ಪನಡ್ಕ ನಿವಾಸಿಯೂ ಕುಂಬ್ಡಾಜೆ ಸೇವಾಸಹಕಾರಿ ಬ್ಯಾಂಕ್‌ನ ಸೆಕ್ಯುರಿಟಿ ನೌಕರನಾದ ಸುರೇಶ್ (42) ಎಂಬವರನ್ನು ಆದಿತ್ಯವಾರ ರಾತ್ರಿ ಇರಿದು ಕೊಲೆಗೈಯ್ಯಲಾಗಿದೆ. ಅಂದು ಸಂಜೆ ಕುಂಬ್ಡಾಜೆ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ವೇಳೆ ಉಂಟಾದ ವಾಗ್ವಾದವೇ ಕೊಲೆಕೃತ್ಯಕ್ಕೆ ಕಾರಣವಾಗಿದೆಯೆಂದು ತಿಳಿದುಬಂದಿದೆ.
ಕುಂಬ್ಡಾಜೆ ಬ್ಯಾಂಕ್‌ನ ಸಮೀಪದಲ್ಲಿ ಅಂದು ರಾತ್ರಿ ಸುರೇಶ್‌ಗೆ ಆರೋಪಿಗಳು ಇರಿದು ಕೊಲೆಗೈದಿದ್ದರು. ಘಟನೆ ಬಳಿಕ ತಲೆಮರೆಸಿಕೊಂಡ ಆರೋಪಿಗಳಾದ ಕಿರಣ್ ಹಾಗೂ ಅಖಿಲೇಶ್‌ರನ್ನು ಪುತ್ತೂರಿನಿಂದ ಕಾಸರಗೋಡು ಎಎಸ್‌ಪಿ ಅಚ್ಯುತ ಅಶೋಕ್‌ರ ನೇತೃತ್ವದಲ್ಲಿ ಗಂಟೆಗಳೊಳಗೆ ಸೆರೆಹಿಡಿಯಲಾಗಿತ್ತು. ಬಳಿಕ ಆರೋಪಿಗಳನ್ನು ಬದಿಯಡ್ಕಕ್ಕೆ ತಲುಪಿಸಿ ತನಿಖೆಗೊಳಪಡಿಸಿದಾಗ ಕೊಲೆಕೃತ್ಯಕ್ಕೆ ಬಳಸಿದ ಚಾಕುವನ್ನು ಪುತ್ತೂರಿನ ಹೊಳೆಯಲ್ಲಿ ಉಪೇಕ್ಷಿಸಿರುವುದಾಗಿ ಆರೋಪಿಗಳು ತಿಳಿಸಿದ್ದರು.





