ಮುಳ್ಳೇರಿಯ: ಕೆಲಸ ವೇಳೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಕೆಎಸ್‌ಇಬಿಯ ಗುತ್ತಿಗೆ ನೌಕರ ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಕೆಎಸ್‌ಇಬಿ ಮುಳ್ಳೇರಿಯ ಇಲೆಕ್ಟ್ರಿಕಲ್ ಸೆಕ್ಷನ್ ನೌಕರನಾದ ಕುಂಟಾರು ಹುಣಸೆಯಡ್ಕ ನಿವಾಸಿ ಎಚ್. ಯತೀಶ (41) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ಕಾರಡ್ಕ ಬಳಿಯ ಮೂಡಾಂಕುಳ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬ ಸ್ಥಾಪಿಸಿದ ಬಳಿಕ ಮತ್ತೊಂದು ಕಂಬದಿಂದ ತಂತಿ ಎಳೆದು ಕಟ್ಟುತ್ತಿದ್ದಾಗ ದುರ್ಘಟನೆ ಉಂಟಾಗಿದೆ. ಈ ವೇಳೆ ಯತೀಶ ಕಂಬದ ಮೇಲಿದ್ದರು. ತಂತಿ ಎಳೆದು ಕಟ್ಟುತ್ತಿದ್ದಂತೆ ಕಂಬ ಮುರಿದು ಬಿದ್ದಿದ್ದು, ಇದರಿಂದ ಯತೀಶ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಆದೂರು ಪೊಲೀಸರು ಮೃತದೇಹದ ಮಹಜರು ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅನಂತರ ಮೃತದೇಹವನ್ನು ಮುಳ್ಳೇರಿಯ ಪೇಟೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿ ಸಲಾಯಿತು. ಬಳಿಕ ಕುಂಟಾರಿನ ಮನೆಗೆ ತಲುಪಿಸಿ ಹಿತ್ತಿಲಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ದಿ| ಸಂಜೀವ ರಾವ್- ಕೆ. ಲಲಿತ ದಂಪತಿಯ ಪುತ್ರನಾದ ಮೃತರು ಪತ್ನಿ ನವನೀತ, 4 ತಿಂಗಳ ಪ್ರಾಯದ ಪುತ್ರಿ, ಸಹೋದರ- ಸಹೋದರಿಯರಾದ ಶಂಕರ, ಶಿವಪ್ರಸಾದ್, ಯಶ್ವಂತ, ಭವಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







