ಮಂಜೇಶ್ವರ: ಸಾಂಸ್ಕೃತಿಕವಾಗಿ ಶ್ರೀಮಂತವಾದ ಗಡಿ ಪ್ರದೇಶದಿಂದ ದಕ್ಷಿಣ ಕೊರಿಯಾದ ಸೋಲ್ನಲ್ಲಿರುವ ಅಂತಾರಾಷ್ಟ್ರೀಯ ವೇದಿಕೆಯವರೆಗೆ ತನ್ನ ಸಾಧನೆಯನ್ನು ಉದ್ಯಾವರ ನಿವಾಸಿ ರವೀಂದ್ರ ಕೆ.ಎಸ್- ಕುಶಲ ಆರ್. ದಂಪತಿ ಪುತ್ರಿ ಕ್ಷಮಾ ರವೀಂದ್ರ ವಿಸ್ತರಿಸಿಕೊಂಡಿದ್ದಾರೆ. ನಿನ್ನೆಯಿಂದ ಆರಂಭಗೊಂಡ ವುಮೆನ್ ಆಫ್ ದಿ ಯೂನಿವರ್ಸ್ 2026ರಲ್ಲಿ ಭಾರತವನ್ನು ಪ್ರತಿನಿಧೀಕರಿಸಿ ಸ್ಪರ್ಧಿಸಲು ಇವರು ಅಲ್ಲಿಗೆ ತಲುಪಿದ್ದಾರೆ. ಗಡಿ ಪ್ರದೇಶವಾದ ಮಂಜೇಶ್ವರದಲ್ಲಿ ಹುಟ್ಟಿ ಬೆಳೆದು ಕೇರಳ ಮತ್ತು ಕರ್ನಾಟಕದಲ್ಲಿ ಸಂಪರ್ಕವನ್ನು ಹೊಂದಿ ಶಿಕ್ಷಣ ಕೈಗೊಂಡ ಇವರು ಬಳಿಕ 12 ವರ್ಷ ಜಿಸಿಸಿಯಲ್ಲಿ ವಾಸವಾಗಿದ್ದರು. ಆ ಬಳಿಕ ಮಂಗಳೂರಿಗೆ ಮರಳಿದ್ದು, ಆಧ್ಯಾತ್ಮಿಕ ಮಾರ್ಗದರ್ಶನ, ಎನರ್ಜಿ ಹೀಲಿಂಗ್, ಟ್ಯಾರೋಟ್ ಮತ್ತು ಆಕಾಶಿಕ್ ರೆಕಾರ್ಡ್ ರೀಡಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಇವರು ಮೋಡೆಲಿಂಗ್ ಹವ್ಯಾಸವಾಗಿ ಸ್ವೀಕರಿಸಿದ್ದಾರೆ. ಮಂಗಳೂರಿನಲ್ಲಿ ಎಂಪಯರ್ ಮಾಲ್ ಕಟ್ಟಡದಲ್ಲಿ ಸೋಲೋಹೀಲಿಂಗ್ ಸೆಂಟರ್ ಹೊಂದಿರುವ ಇವರು 2026ರ ಮಿಸ್ಸೆಸ್ ಇಂಡಿಯಾ ಕ್ವೀನ್ ಆಫ್ ಸಬ್ಸ್ಟೆನ್ಸ್ ಸ್ಪರ್ಧೆಯಿಂದ ತನ್ನ ಮೋಡೆಲಿಂಗ್ ಪಯಣ ಆರಂಭಿಸಿದರು. ಫಸ್ಟ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಇವರು ಬ್ಯೂಟಿ ವಿದ್ ಪರ್ಪಸ್ ಪ್ರಶಸ್ತಿಯನ್ನು ಪಡೆದರು. ಈ ಸಾಧನೆ ಇವರನ್ನು ಈಗ ದಕ್ಷಿಣ ಕೊರಿಯದ ಯೂನಿವರ್ಸ್ ಸ್ಪರ್ಧೆವರೆಗೆ ತಂದು ನಿಲ್ಲಿಸಿದೆ. ಈ ಬಹುಮಾನ ಭಾರತವನ್ನು ಪ್ರತಿನಿಧೀಕರಿಸುವ ಅವಕಾಶದ ಬಾಗಿಲು ಇವರಿಗೆ ತೆರೆದುಕೊಟ್ಟಿತು.
ಆಕಾಂಕ್ಷೀಯ ಫೌಂಡೇಶನ್ ಸ್ಥಾಪಿಸಿ ಭಾವನಾತ್ಮಕ ಯೋಗಕ್ಷೇಮ, ಸಹಾನುಭೂತಿ, ಪ್ರಜ್ಞಾಪೂರ್ವಕ ಜೀವನ, ಸಾಮಾಜಿಕ ಜವಾಬ್ದಾರಿಯ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸತ್ತಿದ್ದಾರೆ. ‘ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ನನಗೆ ಅತ್ಯಂತ ಹೆಮ್ಮೆ ಇದೆ’ ಎಂದು ಅವರು ನುಡಿದಿದ್ದಾರೆ. ಎಲ್ಲಾ ಭಾರತೀಯರ ಆಶೀರ್ವಾ ದವನ್ನು ಬಯಸುತ್ತಿರುವುದಾಗಿಯೂ ಪ್ರಯಾಣ ವೇಳೆ ಅವರು ತಿಳಿಸಿದ್ದಾರೆ.






