ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ 9ನೇ ವಾರ್ಡ್ ಆಗಿರುವ ಕೊಡ್ಯಮ್ಮೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದೆ. ಮುಸ್ಲಿಂ ಲೀಗ್ ಅಭ್ಯರ್ಥಿ ಹಾಗೂ ಸ್ವತಂತ್ರ ಅಭ್ಯರ್ಥಿ ಮಧ್ಯೆ ಹಣಾಹಣಿ ನಡೆಯುತ್ತಿದೆ. ಇವರ ಹೊರತು ಸಿಪಿಎಂ ಹಾಗೂ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮುಸ್ಲಿಂ ಲೀಗ್‌ನಿಂದ ಅಬ್ಬಾಸ್ ಸ್ಪರ್ಧಿಸುತ್ತಿದ್ದಾರೆ. ಸಾರ್ವಜನಿಕ ರಂಗದಲ್ಲಿ ಹಾಗೂ ಅಧ್ಯಾಪನದಲ್ಲಿ ಪರಿಣಿತರಾದ ಇವರು ಹಲವು ಕಾಲದಿಂದ ಲೀಗ್‌ನ ಸಕ್ರಿಯ ಕಾರ್ಯ ಕರ್ತನಾಗಿ ದುಡಿಯುತ್ತಿದ್ದಾರೆ. ಇದರಿಂದ ಪರಂಪರಾಗತ ಲೀಗ್ ಮತಗಳು ಇವರಿಗೆ ಅನುಕೂಲವಾಗಲಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಮೊದಲ ಬಾರಿಯಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಬ್ದುಸಲಾಂ ಯುವಕರ ಮಧ್ಯೆ ಹಾಗೂ ಎಪಿ ವಿಭಾಗ ಸುನ್ನಿ ಕಾರ್ಯಕರ್ತರ ಮಧ್ಯೆ ಚಿರ ಪರಿಚಿತ ವ್ಯಕ್ತಿಯಾಗಿದ್ದಾರೆ. ಕೆಳಗಿನ ಕೊಡ್ಯಮ್ಮೆ, ಛತ್ರಂಪಳ್ಳ, ಊಜಾರ್ ಮೊದಲಾದ ಪ್ರದೇಶಗಳು ಒಳಪಡುವ ಕೊಡ್ಯಮ್ಮೆಯಲ್ಲಿ ಅಬ್ದುಸಲಾಂಗೆ ಮೇಲುಗೈ ಸಾಧಿಸಲು ಸಾಧ್ಯವಾಗಿದೆ ಎಂದು ಇವರನ್ನು ಬೆಂಬಲಿಸುವವರು ಹೇಳುತ್ತಿದ್ದಾರೆ. ಮುಸ್ಲಿಂ ಲೀಗ್ ಕಾರ್ಯಕರ್ತರ ಮಧ್ಯೆ ಉಂಟಾಗಿರುವ ಅಸಮಾಧಾನ, ಪಕ್ಷ ವಿರುದ್ಧ ಚಟುವಟಿಕೆಗಳಿಂದ ಮುಸ್ಲಿಂ ಲೀಗ್ ಹೊರ ಹಾಕಿದವರ ಬೆಂಬಲ ವನ್ನು ಅಬ್ದುಸಲಾಂ ನಿರೀಕ್ಷಿಸುತ್ತಿದ್ದಾರೆ. ಕೊಡ್ಯಮ್ಮೆಯ ಕಂಚಿಕಟ್ಟೆ ಸೇತುವೆ ಸಹಿತ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಅಬ್ದುಸಲಾಂ ಬೊಟ್ಟು ಮಾಡುತ್ತಿದ್ದಾರೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ ಸಿಪಿಎಂ ಈ ಬಾರಿ ಪಕ್ಷದ ಸಕ್ರಿಯ ಕಾರ್ಯಕರ್ತನಾದ ಯು.ಎಸ್. ಶಶಿಧರನ್‌ರನ್ನು ಕಣಕ್ಕಿಳಿಸಿದೆ. ಲೀಗ್ ವಿರುದ್ಧ ಮತಗಳು ಕಳೆದ ಬಾರಿ ಎಲ್‌ಡಿಎಫ್‌ಗೆ ಸಹಾಯಕವಾಗಿತ್ತು. ಈ ಬಾರಿ ಸಿಪಿಎಂ ಜಾತ್ಯತೀತ ಮತಗಳ ಮೇಲೆ ನಿರೀಕ್ಷೆ ಇರಿಸಿದೆ. ಬಿಜೆಪಿಯಿಂದ ಯು. ರಾಜೇಶ್ ರೈ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಹಾಗೂ ಯುವಜನತೆಯ ಮಧ್ಯೆ ಇವರು ಸುಪರಿಚಿತನಾದ ವ್ಯಕ್ತಿಯಾಗಿದ್ದಾರೆ. ಬಿಜೆಪಿಯ ಮತಗಳು ಬಿಜೆಪಿ ಅಭ್ಯರ್ಥಿಗೆ ಮಾತ್ರವೇ ಲಭಿಸಬಹು ದಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಈ ಬಾರಿ ಕೊಡ್ಯಮ್ಮೆಯಲ್ಲಿ ಬಿಜೆಪಿಗೆ ಮತಗಳ ಹೆಚ್ಚಳವುಂಟಾಗಿದೆ ಎಂದೂ ಬಿಜೆಪಿ ಮೂಲಗಳು ತಿಳಿಸುತ್ತಿವೆ. ಚತುಷ್ಕೋನ ಸ್ಪರ್ಧೆ ನಡೆಯುವ ಕೊಡ್ಯಮ್ಮೆಯಲ್ಲಿ ಪ್ರಬಲ ಹೋರಾಟ ನಡೆಯುವುದರೊಂದಿಗೆ ಫಲಿತಾಂಶ ಏನಾಗಬಹುದೆಂದು ಹೇಳಲು ಸಾಧ್ಯವಾಗದಂತಾಗಿದೆ.







