ಕಾಸರಗೋಡು : ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿAದ ಹತ್ತನೇ ತರಗತಿಯ ತನಕ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಗೆ ಕೇರಳ ರಾಜ್ಯಪಾಲರು ಸಹಿ ಹಾಕಿರುವುದಕ್ಕೆ ಕಾಸರಗೋಡಿನಲ್ಲಿ ಸೇರಿದ ವಿವಿಧ ಕನ್ನಡ ಪರ ಸಂಸ್ಥೆಗಳ ಪ್ರತಿನಿಧಿಗಳ ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಮಸೂದೆಯ ವ್ಯಾಪ್ತಿಯಿಂದ ಕಾಸರಗೋಡನ್ನು ಹೊರತುಪಡಿಸಬೇಕೆಂದು ಸಭೆ ಒತ್ತಾಯಿಸಿದೆ. ಕನ್ನಡ ಮಾಧ್ಯಮ ಮಾತ್ರ ಇರುವ ಕಾಸರಗೋಡಿನ 84 ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಮಲಯಾಳಂ ಹೇರಲು ಮಲಯಾಳ ಅಧ್ಯಾಪಕರನ್ನು ನೇಮಕ ಮಾಡಿರುವ ಸರಕಾರವು ಈ ಮಸೂದೆಯ ಮೂಲಕ ಕಾಸರಗೋಡಿನ ಕನ್ನಡ ಶಾಲೆಗಳನ್ನು, ಇಲ್ಲಿನ ಕನ್ನಡ ಸಂಸ್ಕೃತಿಯನ್ನು ನಾಶ ಮಾಡಲು ಮುಂದಾಗಿದೆ. ಭಾರತದ ಸಂವಿಧಾನವು ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ನೀಡಿದ ಸವಲತ್ತುಗಳನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಸಭೆ ಅಭಿಪ್ರಾಯ ಪಟ್ಟಿದೆ. ಮಲಯಾಳ ಭಾಷಾ ಮಸೂದೆ 2025- ಇದರ ವಿರುದ್ಧ ಹೈಕೋರ್ಟಿನಲ್ಲಿ ದಾವೆ ಹೂಡುವುದು ಸೇರಿದಂತೆ ವಿವಿಧ ಸಾಧ್ಯತೆಗಳ ಕುರಿತು ಸಭೆ ಚರ್ಚಿಸಿತು.
ಕಾಸರಗೋಡಿನ ಸರ್ವ ಕನ್ನಡಿಗರ ಅಭಿಪ್ರಾಯವನ್ನು ತಿಳಿದುಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಕರ್ನಾಟಕ ಸಮಿತಿಯ ನೇತೃತ್ವದಲ್ಲಿ ಮಾ. 10ರಂದು ಸಂಜೆ 4.30ಕ್ಕೆ ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ಕಾಸರಗೋಡಿನ ಕನ್ನಡಿಗರ, ಅಧ್ಯಾಪಕರ ಮತ್ತು ಕಾಸರಗೋಡಿನ ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಲು ತೀರ್ಮಾನಿಸಲಾಯಿತು .
ಹಿರಿಯ ನ್ಯಾಯವಾದಿ ಐ. ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ . ಮುರಳೀಧರ ಬಳ್ಳಕ್ಕುರಾಯ, ಕರ್ನಾಟಕ ಗಮಕ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕರೆ ಶಂಕರನಾರಾಯಣ ಭಟ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾರ್ಯದರ್ಶಿ ಕೆ. ಬಾಬು, ನಿವೃತ್ತ ಪ್ರಾಧ್ಯಾಪಿಕೆ ಡಾ. ಮಹೇಶ್ವರಿ.ಯು, ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ನಿವೃತ್ತ ಪ್ರಾಂಶುಪಾಲ ಬೇ.ಸಿ ಗೋಪಾಲಕೃಷ್ಣ, ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಧೀನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಣೂರು, ಮಹಾಲಕ್ಷ್ಮಿ ಭಟ್ ಮಾತನಾಡಿದರು.






