ಕುಂಬಳೆ: ನಿನ್ನೆ ನಡೆದ ಸ್ಥಳೀಯಾಡಳಿತ ಚುನಾವಣೆ ವೇಳೆ ಪುತ್ತಿಗೆಯಲ್ಲಿ ನಕಲಿ ಮತ ಚಲಾಯಿಸಲೆತ್ನಿಸಿದ ಓರ್ವ ಸೆರೆಗೀಡಾಗಿದ್ದಾನೆ. ಮಂಗಲಡ್ಕ ನಿವಾಸಿ ಸಹದ್ ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 5.50 ರ ವೇಳೆ ಪುತ್ತಿಗೆ ಪಂಚಾಯತ್‌ನ ಚೆನ್ನಿಕ್ಕೋಡಿ ಒಂದನೇ ವಾರ್ಡ್ ಮತಗಟ್ಟೆಯಾದ ಧರ್ಮತ್ತಡ್ಕ ಶಾಲೆಯಲ್ಲಿ ಸಹದ್ ನಕಲಿ ಮತ ಚಲಾಯಿಸಲೆತ್ನಿಸಿದ್ದಾನೆ. ಮತದಾನ ಕೊನೆಗೊಳ್ಳಲು 10 ನಿಮಿಷ ಮಾತ್ರವೇ ಬಾಕಿಯಿರುವಾಗ ಮತಗಟ್ಟೆಗೆ ತಲುಪಿದ ಸಹದ್ ಮತ ಚಲಾಯಿಸಲು ಯತ್ನಿಸಿದ್ದನು. ಈತ ಮತ ಚಲಾಯಿ ಸಲು ಬೇರೆ ಯಾರದ್ದೋ ಗುರುತು ಚೀಟಿ ತಂದಿದ್ದನೆನ್ನಲಾಗಿದೆ. ಈತನ ಮೇಲೆ ಅಲ್ಲಿದ್ದ ಬಿಜೆಪಿ ಬೂತ್ ಏಜೆಂಟ್ ಸಂಶಯ ವ್ಯಕ್ತಪಡಿಸಿದ್ದರು. ಇದರಿಂದ ಅಲ್ಲಿದ್ದವರು ಸಹದ್‌ನನ್ನು ತಡೆದು ನಿಲ್ಲಿಸಿದ್ದು ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಈತ ಯಥಾರ್ಥ ಮತದಾರ ಅಲ್ಲವೆಂದು ದೃಢೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಸೈಡಿಂಗ್ ಆಫೀಸರ್ ನೀಡಿದ ದೂರಿನಂತೆ ಪೊಲೀಸರು ಸಹದ್‌ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಸೆರೆಗೀಡಾದ ವ್ಯಕ್ತಿಗೆ ಕ್ಷಮೆ ನೀಡಬೇಕೆಂದು ಮತಗಟ್ಟೆಯಲ್ಲಿದ್ದ ಬಿಜೆಪಿ ನೇತಾರ ಸತೀಶ್ಚಂದ್ರ ಭಂಡಾರಿಯೊಂದಿಗೆ ಸಿಪಿಎಂನ ಪ್ರಮುಖ ನೇತಾರರು ವಿನಂತಿಸಿದ್ದಾರೆ. ಈ ವೇಳೆ ನಕಲಿ ಮತ ವಿಷಯದಲ್ಲಿ ಪಕ್ಷಗಳು ಮಧ್ಯ ಪ್ರವೇಶಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದರು. ನಕಲಿ ಮತ ಚಲಾಯಿಸುವುದು ಹಾಗೂ ಅದಕ್ಕೆ ಪ್ರೋತ್ಸಾಹಿಸುವುದು ಕಾನೂನು ಉಲ್ಲಂಘನೆಯಾಗಿದೆಯೆಂದೂ ಅದನ್ನು ಕಾನೂನು ರೀತಿಯಲ್ಲಿ ಪರಿಹರಿಸಲಿ ಎಂದೂ ಸತೀಶ್ಚಂದ್ರ ಭಂಡಾರಿ ತಿಳಿಸಿದರು. ಬಿಜೆಪಿ ಹಾಗೂ ಸಿಪಿಎಂ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ವಾರ್ಡ್ ಇದಾಗಿದ್ದು, ಸೆರೆಗೀಡಾದ ವ್ಯಕ್ತಿ ಸಿಪಿಎಂ ಕಾರ್ಯಕರ್ತನಾಗಿದ್ದಾನೆಂದೂ ಹೇಳಲಾಗುತ್ತಿದೆ.







