ಕಾಸರಗೋಡು: ಬಸ್ ಪ್ರಯಾಣ ಮಧ್ಯೆ ವೃದ್ದ ಕುಸಿದು ಬಿದ್ದು ಮೃತಪಟ್ಟರು. ಮೂನಾಡ್ ಪೇತಾಳಂಕಯದಲ್ಲಿ ವಾಸಿಸುವ ಎಂ.ಕೆ. ರವೀಂದ್ರನ್ (65) ಕುಸಿದು ಬಿದ್ದು ಮೃತಪಟ್ಟವರು. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಪೊಯಿನಾಚಿಯಿಂದ ಕುಂಡಂಗುಳಿಗಿರುವ ಖಾಸಗಿ ಬಸ್‌ನಲ್ಲಿ ಪೆರ್ಲಡ್ಕ ಬಸ್ ನಿಲ್ದಾಣದಿಂದ ರವೀಂದ್ರನ್ ಬಸ್‌ಗೇರಿದ್ದರು. ಕೊನೆಯ ಸ್ಟೋಪ್ ಆದ ಕುಂಡಂಗುಳಿಗೆ ಬಸ್ ತಲುಪಿದಾಗ ಇತರ ಪ್ರಯಾಣಿಕರೆಲ್ಲ ಇಳಿದು ಹೋದರೂ ಇವರು ಮಾತ್ರ ಇಳಿದಿರಲಿಲ್ಲ. ಸೀಟಿನಲ್ಲಿ ಕುಳಿತಿದ್ದ ಇವರನ್ನು ನಿರ್ವಾಹಕ ತಟ್ಟಿ ಕರೆದರು. ಆದರೂ ಮಿಸುಕಾಡಲಿಲ್ಲ. ಶಂಕೆ ತೋರಿ ಸಮೀಪದ ಕ್ಲಿನಿಕ್‌ಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬಳಿಕ ಮೃತದೇಹವನ್ನು ಬೇಡಡ್ಕ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಬೇಡಡ್ಕ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಯನಾಡ್, ಮಾನಂತವಾಡಿ ನಿವಾಸಿಯಾದ ರವೀಂದ್ರನ್ ಮನೆಯ ವರೊಂದಿಗೆ ವೈಷಮ್ಯ ಹೊಂದಿ ೪೦ ವರ್ಷದ ಹಿಂದೆ ಬೇಡಡ್ಕಕ್ಕೆ ತಲುಪಿದ್ದರು. ಹಲವು ಕಾಲ ಕ್ವಾರೆಯಲ್ಲಿ ಕಾರ್ಮಿಕನಾಗಿದ್ದರು. ಈ ಮಧ್ಯೆ ಕುಂಡಂಪಾರದ ಮಹಿಳೆಯೋರ್ವರನ್ನು ವಿವಾಹವಾದರು. ಬಳಿಕ ಆಕೆಯೊಂದಿಗೆ ಭಿನ್ನಾಭಿಪ್ರಾಯಹೊಂದಿ ವಯನಾಡಿಗೆ ಹಿಂತಿರುಗಿದರು. ಆ ಬಳಿಕ ಮತ್ತೆ ಪತ್ನಿಯ ಬಳಿ ಹಿಂತಿರುಗಿ ಆಕೆಯೊಂದಿ ಗಿನ ವಾಗ್ವಾದದ ಮಧ್ಯೆ ಇರಿದು ಸೆರೆಯಾದರು. ಪ್ರಸ್ತುತ ಪ್ರಕರಣದಲ್ಲಿ ೧೧ ತಿಂಗಳು ಜೈಲಿನಲ್ಲಿದ್ದ ರವೀಂದ್ರನ್ ಹೊರ ಬಂದ ಬಳಿಕ ವಿವಿಧ ಸ್ಥಳಗಳಲ್ಲಿ ವಾಸವಾಗುತ್ತಿದ್ದರು. ಕಳೆದ ಕೆಲವು ಸಮಯಗಳಿಂದ ಕುಂಡಂಗುಳಿಯ ತರವಾಡು ಮನೆಯ ಬಳಿ ಮಲಗಿ ನಿದ್ರಿಸುತ್ತಿ ದ್ದರು. ಮಹಿಳೆಯೋರ್ವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯೆಪ್ರವೇಶಿಸಿ ಆ ಸ್ಥಳದಲ್ಲಿ ಮಲಗದಂತೆ ಮಾಡಿದ್ದರು. ಅದರ ಬಳಿಕ ವಿವಿಧ ಸ್ಥಳಗಳಲ್ಲಿ ಇವರು ನಿದ್ರಿಸುತ್ತಿದ್ದರು. ಈ ಮಧ್ಯೆ ಪತ್ನಿ ವಿವಾಹ ವಿಚ್ಛೇಧನ ಪಡೆದಿರುವುದಾ ಗಿಯೂ ಪೊಲೀಸರು ತಿಳಿಸಿದ್ದಾರೆ.



