ಮಂಜೇಶ್ವರ: ಮುಸ್ಲಿಂಲೀಗ್‌ನ ಅಭ್ಯರ್ಥಿ ಪಟ್ಟಿ ಪೂರ್ತಿಗೊಳ್ಳುತ್ತಿ ರುವಂತೆಯೇ ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಅಭ್ಯರ್ಥಿಗಳಾಗಿ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಇದರಿಂದ ಚುನಾವಣೆ ಸಂದರ್ಭದಲ್ಲೂ, ಅನಂತರವೂ ಪಕ್ಷಕ್ಕೆ ಮಂಜೇಶ್ವರ ಮಂಡಲದಲ್ಲಿ ಯಾರು ನೇತೃತ್ವ ನೀಡುವರೆಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಮಂಜೇಶ್ವರ ಮಂಡಲ ಲೀಗ್ ಕಮಿಟಿಯನ್ನು ಕೂಡಲೇ ವಿಸರ್ಜಿಸಿ ಅಡ್‌ಹೋಕ್ ಕಮಿಟಿ ರೂಪೀಕರಿಸಬೇಕೆಂದು ಒತ್ತಾಯವೂ ಕೇಳಿ ಬಂದಿದೆ. ಇದೇ ವೇಳೆ ಅಸೀಸ್ ಮರಿಕ್ಕೆ ಅವರನ್ನು ಮಂಡಲ ಲೀಗ್ ಅಧ್ಯಕ್ಷ ಸ್ಥಾನದಿಂದ ಅತೀ ಶೀಘ್ರವಾಗಿ ತೆರವುಗೊಳಿಸಬೇಕೆಂದು ಮಂಗಲ್ಪಾಡಿ ಪಂಚಾಯತ್ ಲೀಗ್ ಪದಾಧಿಕಾರಿಗಳು ಜಿಲ್ಲಾ ನಾಯಕತ್ವದೊಂದಿಗೆ ಆಗ್ರಹಪಟ್ಟಿದ್ದಾರೆ. ಲೀಗ್ ಮಂಜೇಶ್ವರ ಮಂಡಲ ಅಧ್ಯಕ್ಷ ಅಸೀಸ್ ಮರಿಕ್ಕೆ ಬಂದ್ಯೋಡ್ ಡಿವಿಶನ್‌ನಿಂದ ಮಂಜೇಶ್ವರ ಬ್ಲೋಕ್ ಪಂಚಾಯತ್‌ಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಇದೇ ವೇಳೆ ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್ ಕುಂಬಳೆ ಪಂಚಾಯತ್‌ನ ಕಕ್ಕಳಂಕುನ್ನು ವಾರ್ಡ್‌ನಲ್ಲಿ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ. ಮಂಡಲ ಕೋಶಾಧಿಕಾರಿ ಯು.ಕೆ. ಸೈಪುಲ್ಲ ತಂಙಲ್ ಇವರೊಂದಿಗೆ ಸ್ಪರ್ಧಾ ಕಣದಲ್ಲಿದ್ದಾರೆ. ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಬಡಾಜೆ ಡಿವಿಶನ್‌ನಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಮಂಡಲ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಚುನಾವಣಾ ರಂಗಕ್ಕೆ ಇಳಿಯುವುದರೊಂದಿಗೆ ಉಪಾಧ್ಯಕ್ಷ ಪಿ.ಎಂ. ಸಲೀಂರನ್ನು ಮಂಗಲ್ಪಾಡಿ ಪಂಚಾಯತ್‌ನ ನಯಾಬಜಾರ್ ವಾರ್ಡ್‌ನಲ್ಲೂ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಈ ಎಲ್ಲಾ ಪದಾಧಿಕಾರಿಗಳು ಸ್ಪರ್ಧಾ ಕಣಕ್ಕಿಳಿದಾಗ ಉಳಿದಿಬ್ಬರು ಕಾರ್ಯದರ್ಶಿಗಳನ್ನು ಹೇಗೆ ಸಮಾಧಾನಪಡಿಸುವುದೆಂದು ತಿಳಿಯಲಾಗದೆ ನಾಯಕತ್ವ ಚಿಂತೆಯಲ್ಲಿದೆ ಹೇಳಲಾಗುತ್ತಿದೆ. ಈ ಪೈಕಿ ಒಬ್ಬರಾದ ಎಂ.ಪಿ. ಖಾಲಿದ್‌ರನ್ನು ಕುಂಬಳೆ ಪಂಚಾಯತ್‌ನ ಬಂಬ್ರಾಣ ವಾರ್ಡ್‌ನಲ್ಲೂ, ಇನ್ನೋರ್ವ ಕಾರ್ಯದರ್ಶಿಯಾದ ಸಿದ್ಧಿಕ್ ವಳಮೊಗರು ಅವರನ್ನು ಎಣ್ಮಕಜೆ ಪಂಚಾಯತ್‌ನ ಶೇಣಿಯಲ್ಲೂ ಅಭ್ಯರ್ಥಿಗಳಾಗಿ ಸ್ಪರ್ಧಾ ಕಣಕ್ಕಿಳಿಸಲಾಗಿದೆ. ಸ್ಥಿತಿ ಹೀಗಿರುವಾಗ ಪಕ್ಷದ ಮಂಡಲ ಪದಾಧಿಕಾರಿ ಸ್ಥಾನ ಹಾಗೂ ತ್ರಿಸ್ತರ ಪಂಚಾಯತ್ ಆಡಳಿತವನ್ನು ಅವರು ಹೇಗೆ ನಿರ್ವಹಿಸುವರೆಂದು ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎರಡು ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ತಾಕತ್ತು ಇವರಿಗಿದೆಯೇ ಎಂಬ ಆತಂಕ ಕೂಡ ಕಾರ್ಯಕರ್ತರಲ್ಲಿದೆಯೆಂದು ಹೇಳಲಾಗುತ್ತದೆ. ಇದೇ ಸಂದರ್ಭದಲ್ಲಿ ಘೋಷಣೆ ಮೊಳಗಿಸಲು ಹಾಗೂ ಧ್ವಜ ಹಾರಿಸಲು ಆಸಕ್ತಿ ತೋರುವ ಪ್ರಾಮಾಣಿಕ ಕಾರ್ಯಕರ್ತರು ಇನ್ನು ಎಲ್ಲಿ ಹೇಗೆ ಘೋಷಣೆ ಮೊಳಗಿಸಬೇಕೆಂದು ತಿಳಿಯದೇ ಗೊಂದಲಕ್ಕೊಳಗಾಗಿದ್ದಾರೆ.






