ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆಗೊಳ್ಳುತ್ತಿರುವ ಪ್ರದಾನ ಪೈಪ್‌ನಿಂದ ದಿನನಿತ್ಯ ಸಾವಿರಾರು ಲೀಟರ್ ಕುಡಿಯುವ ನೀರು ಪೋಲಾಗುತ್ತಿದ್ದು, ದುರಸ್ತಿಗೊಳಿಸದಿ ರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ. ಕೈಕಂಬ-ಬಾಯಾರು ರಸ್ತೆಯ ಬೇಕೂರು ಹಳೇ ಅಂಚೆ ಕಚೇರಿ ಸಮೀಪದಲ್ಲಿ ಪೈಪ್ ಬಿರುಕು ಬಿಟ್ಟು ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ಕೊಡಂಗೆ ಹೊಳೆಯಲ್ಲಿರುವ ಬಾವಿಯಿಂದ ಬೇಕೂರು ಹಿರಣ್ಯಪದವಿನ ಟ್ಯಾಂಕ್‌ಗೆ ಸರಬರಾಜುಗೊಳ್ಳುತ್ತಿರುವ ಪ್ರಧಾನ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿದೆ. ಇಲ್ಲಿ ವಾಲ್‌ಗೇಟ್‌ನ್ನು ನಿರ್ಮಿಸಲಾಗಿದೆ. ಇದರಲ್ಲಿ ಸೋರಿಕೆಯಾದ ನೀರು ಪರಿಸರದ ಚರಂಡಿ ಸೇರುತ್ತಿದೆ. ಹಲವು ವರ್ಷಗಳಿಂದ ಸೋರಿಕೆಯಾಗುತ್ತಿದ್ದು, ಇದನ್ನು ದುರಸ್ತಿಗೊಳಿಸಿದರೂ ಮತ್ತೆ ಮತ್ತೆ ಬಿರುಕು ಬಿಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹೊಳೆಯಲ್ಲಿ ನೀರಿನ ಕೊರತೆಯಿಂದ ಈಗಾಗಲೇ ಹಲವಾರು ದಿನಗಳಿಗೊಮ್ಮೆ ವಿತರಿಸಲಾಗುತ್ತಿದ್ದು, ಇದೇ ರೀತಿ ಅಲ್ಲಲ್ಲಿ ನೀರು ಪೋಲಾಗುತ್ತಿದ್ದಲ್ಲಿ ಮುಂದೆ ನೀರಿನ ಕ್ಷಾಮ ತೀವ್ರಗೊಳ್ಳಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಪೋಲಾಗುತ್ತಿರುವ ನೀರನ್ನು ತಡೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







