ಅಧಿಕಾರಿಗಳ ಕಣ್ಣಿಗೆ ಬೀಳದ ನಗರದ ಪ್ರಧಾನ ರಸ್ತೆಯ ಬೃಹತ್ ಹೊಂಡ: ಅಪಘಾತ ಭೀತಿಯಲ್ಲಿ ಸವಾರರು

ಕಾಸರಗೋಡು: ನಗರದ ಪ್ರಧಾನ ರಸ್ತೆಗಳಲ್ಲೊಂದಾದ ಕೆಪಿಆರ್ ರಾವ್ ರೋಡ್‌ನಲ್ಲಿ ಬೃಹತ್ ಹೊಂಡ ಪ್ರತ್ಯಕ್ಷಗೊಂಡು ಅಪಾಯವನ್ನು ಕೈಬೀಸಿ ಕರೆಯುತ್ತಿದೆ. ನಗರದ ಪ್ರಧಾನ ಅಂಚೆಕಚೇರಿ ಸಮೀಪದಲ್ಲೇ ಕೆಪಿಆರ್ ರಾವ್ ರಸ್ತೆಯಲ್ಲಿ ಈ ಹೊಂಡ ಸೃಷ್ಟಿಯಾಗಿದ್ದು, ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ. ದಿನದಿಂದ ದಿನಕ್ಕೆ ಹೊಂಡದ ಗಾತ್ರ ಬೆಳೆಯುತ್ತಿದ್ದು, ಹಲವು ವಾಹನಗಳು ಹೊಂಡದೊಳಗೆ ಬಿದ್ದು ಅಪಘಾತ ಸಂಭವಿಸಿರುವುದಾಗಿಯೂ ಹೇಳಲಾಗುತ್ತಿದೆ. ನಗರದ ಪ್ರಧಾನ ಭಾಗದಲ್ಲಿ ಕಂಡುಬರುವ ಈ ಹೊಂಡವನ್ನು ಮುಚ್ಚಲು ಇದುವರೆಗೂ ಯಾವುದೇ ಕ್ರಮ ಉಂಟಾಗಲಿಲ್ಲವೆಂದು ದೂರಲಾಗಿದೆ. ರಸ್ತೆಯಲ್ಲಿರುವ ಈ ಹೊಂಡ ನೀರು ತುಂಬಿದರೆ ಸವಾರರ ಗಮನಕ್ಕೆ ಬಾರದೆ ಹೊಂಡಕ್ಕೆ ಬೀಳುವ ಅಪಾಯಸಾಧ್ಯತೆ ಇದೆ. ಹೊಂಡದ ಆಳ-ಅಗಲ ಹೆಚ್ಚಾಗುತ್ತಿದ್ದು, ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಅಧಿಕಾರಿಗಳ ಸಹಿತ ಸಂಬಂಧ ಪಟ್ಟವರೆಲ್ಲ ದಿನಂಪ್ರತಿ ಸಂಚರಿಸುವ ಈ ರಸ್ತೆಯ ದುಸ್ತಿತಿಗೆ ಪರಿಹಾರ ಕಾಣಲು ಮುಂದಾಗದಿರುವುದು ಜನರಲ್ಲಿ ರೋಷಕ್ಕೆ ಕಾರಣವಾಗಿದೆ.

You cannot copy contents of this page