ಮಂಜೇಶ್ವರ: ತಲಪ್ಪಾಡಿಯಲ್ಲಿ ಅಪಘಾತಕ್ಕೀಡಾದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕವಸ್ತು ಪತ್ತೆಯಾಗಿದ್ದು ಈ ಸಂಬಂಧ ಪರಾರಿಯಾದ ಉಪ್ಪಳ ನಿವಾಸಿಗಾಗಿ ಉಳ್ಳಾಲ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.
ಉಪ್ಪಳ ನಿವಾಸಿಯಾದ ಸಿದ್ದಿಕ್ ಎಂಬಾತ ಪರಾರಿಯಾದ ವ್ಯಕ್ತಿಯೆಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಮೂಲದ ಆದಂ ಎಂಬಾತ ಅಪಘಾತದಲ್ಲಿ ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ೭.೩೦ರ ವೇಳೆ ತಲಪ್ಪಾಡಿಯಲ್ಲಿರುವ ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಟ್ಯಾಂಕರ್ ಲಾರಿಗೆ ಮಂಗಳೂರು ಭಾಗದಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ತಕ್ಷಣ ಅದರ ಚಾಲಕನಾದ ಸಿದ್ದಿಕ್ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಆದಂ ಗಂಭೀರ ಗಾಯಗೊಂಡಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿದೆ. ವಿಷಯ ತಿಳಿದು ಉಳ್ಳಾಲ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ಕಾರಿನಲ್ಲಿ 3.90 ಲಕ್ಷ ರೂ. ಮೌಲ್ಯದ ೭೮ ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಚಿಕಿತ್ಸೆಯಲ್ಲಿರುವ ಆದಂನನ್ನು ವಿಚಾರಿಸಿದಾಗ ಪರಾರಿಯಾದ ವ್ಯಕ್ತಿ ಉಪ್ಪಳ ನಿವಾಸಿಯಾದ ಸಿದ್ದಿಕ್ ಆಗಿದ್ದಾನೆಂದು ತಿಳಿದುಬಂದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.







