ಕಾಸರಗೋಡು: ಮೆಡಿಕಲ್ ಕಾಲೇಜ್‌ನ ನಿರ್ಮಾಣ ಚಟುವಟಿಕೆಗಳನ್ನು ಸಮಯಾನುಸಾರ ಪೂರ್ತಿಗೊಳಿಸಲು, ಜಿಲ್ಲೆಯ ಆರೋಗ್ಯ ವಲಯ ಎದುರಿಸುತ್ತಿರುವ ತುರ್ತು ಸಮಸ್ಯೆಗಳಿಗೆ ಪರಿಹಾರ ಕಾಣಲು ಸೆಪ್ಟಂಬರ್ 9ರಂದು ತಿರುವನಂತಪುರದಲ್ಲಿ ಆರೋಗ್ಯ ಸಚಿವ ಕೆ. ಮುರಳೀಧರನ್‌ರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ. ವಿಷಯದಲ್ಲಿ ತುರ್ತು ಮಧ್ಯಪ್ರವೇಶ ಮಾಡಬೇಕೆಂದು ಶಾಸಕ ಕಲ್ಲಟ್ರ ಮಾಹಿನ್‌ರ ಮನವಿ ಹಿನ್ನೆಲೆಯಲ್ಲಿ ಸಚಿವರು ಈ ನಿರ್ದೇಶ ನೀಡಿದ್ದಾರೆ. ಮೆಡಿಕಲ್ ಕಾಲೇಜ್‌ನ ಬಾಕಿ ಉಳಿದಿರುವ ನಿರ್ಮಾಣ ಕಾಮಗಾರಿಗಳನ್ನು ವೇಗದಲ್ಲಿ ಪೂರ್ತಿಗೊಳಿಸುವುದು, ಆಸ್ಪತ್ರೆಯ ಪೂರ್ಣ ಮಟ್ಟದ ಚಟುವಟಿಕೆಗಳನ್ನು ಆದಷ್ಟು ಬೇಗ ಆರಂಭಿಸುವುದು, ಜಿಲ್ಲೆಯ ಇತರ ಪ್ರಧಾನ ಆಸ್ಪತ್ರೆಗಳಲ್ಲೂ, ಆರೋಗ್ಯ ಕೇಂದ್ರಗಳಲ್ಲೂ ನೌಕರರನ್ನು, ಭೌತಿಕ ಸನ್ನಿವೇಶಗಳ ಕೊರತೆಯನ್ನು ಪರಿಹರಿಸುವುದು ಮೊದಲಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು.






