ಕಣ್ಣೂರು: ಮೊಬೈಲ್‌ಗೇಮ್ ಆಡುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಮನನೊಂದು 17ರ ಹರೆಯದ ಬಾಲಕ ಮನೆ ಬಿಟ್ಟು ತೆರಳಿದ್ದಾನೆ. ಪ್ಲಸ್ ಟು ವಿದ್ಯಾರ್ಥಿ ಶಿವಸೂರ್ಯ ನಾಪತ್ತೆಯಾದ ವಿದ್ಯಾರ್ಥಿ. ಚೊಕ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತನಿಖೆ ಆರಂಭಿಸಲಾಗಿದೆ. ಆಗಸ್ಟ್ ೮ರಿಂದ ಬಾಲಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮೊಬೈಲ್‌ಗೇಮ್ ಆಡುವುದು ನಿತ್ಯ ಹವ್ಯಾಸವನ್ನಾಗಿ ಮಾಡಿಕೊಂಡಿದ್ದ ಈತನಿಂದ ತಂದೆ ಫೋನ್ ಪಡೆದು ತೆಗೆದಿರಿಸಿದ್ದರು. ಆನ್‌ಲೈನ್ ಗೇಮ್‌ಗಳನ್ನು ಈತ ಖಾಯಂ ಆಗಿ ಆಡುತ್ತಿದ್ದನೆನ್ನಲಾಗಿದೆ. ಇದರಿಂದ ಮನೆಮಂದಿಗೆ ಹಲವು ಸಮಸ್ಯೆಗಳು ಸೃಷ್ಟಿಯಾಗಿತ್ತು. ಗೇಮ್ ಮೂಲಕ ಈತನಿಗೆ ತುಂಬಾ ಹಣ ನಷ್ಟಗೊಂಡಿತ್ತು. ಫೋನ್ ತೆಗೆದಿರಿಸಿದ ಬಳಿಕ ಪತ್ರ ಬರೆದಿಟ್ಟು ಈತ ಮನೆಯಿಂದ ನಾಪತ್ತೆಯಾಗಿದ್ದಾನೆ. ‘ನಾನು ಕಾಶಿಗೆ ಹೋಗುತ್ತೇನೆ. ಇನ್ನುಳಿದ ಜೀವನ ಅಲ್ಲಿ ಸವೆಸಿ ದೇವರ ಪಾದ ಸೇರುತ್ತೇನೆ’ ಎಂದು ಪತ್ರದಲ್ಲಿ ಬರೆದಿದ್ದನು. ಈತ ಮನೆಯಿಂದ ಹೊರಡುವ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲವೆನ್ನಲಾಗಿದೆ. ತಾಯಿ ಚಿಕ್ಕಂದಿನಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ತಂದೆ ಈತನನ್ನು ಬೆಳೆಸಿದ್ದರು. ತನಿಖೆ ಮುಂದುವರಿಸಲಾಗುತ್ತಿದೆ.






