ಎಸ್‌ಡಿಪಿಐ ಕಾರ್ಯಕರ್ತ ಸೈನುಲ್ ಆಬೀದ್ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

ಕಾಸರಗೋಡು: ಭಾರೀ ರಾಜಕೀಯ ಸಂಚಲನಕ್ಕೆ ಗ್ರಾಸವಾಗಿದ್ದ ಎಸ್‌ಡಿಪಿಐ ಕಾರ್ಯಕರ್ತ ತಳಂಗರೆಯ ಸೈನುಲ್ ಆಬೀದ್ (24) ಕೊಲೆ ಪ್ರಕರಣದ ಎಲ್ಲಾ 21 ಆರೋಪಿಗಳ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ಖುಲಾಸೆಗೊಳಿಸಿ ತೀರ್ಪು ನೀಡಿದೆ.

2014 ಡಿಸೆಂಬರ್ 22ರಂದು ರಾತ್ರಿ ಕಾಸರಗೋಡು ನಗರದ ಎಂ.ಜಿ. ರಸ್ತೆ ಬಳಿಸೈನುಲ್ ಆಬೀದ್‌ನನ್ನು ಅಕ್ರಮಿಗಳ ತಂಡ ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದಿತ್ತು. ಅಬೀದ್‌ನ ತಂದೆ ಎಂ.ಜಿ ರಸ್ತೆಯ ಮುಸ್ಲಿಂ ಲೀಗ್‌ನ ಜಿಲ್ಲಾ ಕಚೇರಿ ಕಟ್ಟಡ ಕೆಳ ಅಂತಸ್ತಿನ ಕೊಠಡಿಯಲ್ಲಿ ಹಾಸಿಗೆ ಮಾರಾಟದಂಗಡಿ ನಡೆಸುತ್ತಿದ್ದು, ಘಟನೆ ನಡೆದ ದಿನದಂದು ರಾತ್ರಿ ೧೦ ಗಂಟೆಗೆ ಆಬೀದ್ ಅಂಗಡಿ ಮುಚ್ಚುತ್ತಿದ್ದ ತಯಾರಿಕೆಯಲ್ಲಿ ತೊಡಗಿದ್ದ ವೇಳೆ ಅಕ್ರಮಿಗಳ ತಂಡ ಅಲ್ಲಿಗೆ ಅಕ್ರಮವಾಗಿ ನುಗ್ಗಿ ತಂದೆಯ ಕಣ್ಣಮುಂದೆಯೇ ಆಬೀದ್‌ನನ್ನು ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಬರ್ಬರವಾಗಿ ಕೊಲೆ ಗೈದಿತ್ತು.

ಕೊಲೆಗೈಯ್ಯಲ್ಪಟ್ಟ ಆಬೀದ್‌ನ ತಂದೆ ಕೆ.ಪಿ.ಮುಹಮ್ಮದ್ ಈ ಕೊಲೆ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದು, ಅವರು ನಂತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವೈಯಕ್ತಿಕ ದ್ವೇಷವೇ ಈ ಕೊಲೆಗೆ ಕಾರಣವೆಂದು ಹೇಳಲಾಗಿದೆ.

ಉದಯನ್, ಪ್ರಶಾಂತ್, ಮಹೇಶ್, ಅನಿ ಯಾನೆ ಅನಿಲ್ ಕುಮಾರ್ ಸೇರಿದಂತೆ 21 ಮಂದಿ ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಅಂದು ಕಾಸರಗೋಡು ಎಸ್‌ಪಿ ಆಗಿದ್ದ ಥೋಮ್ಸನ್ ಜೋಸ್‌ರ ಮೇಲ್ನೋಟದಲ್ಲಿ ಅಂದು ಡಿವೈಎಸ್‌ಪಿ ಆಗಿದ್ದ ಟಿ.ಪಿ. ರಂಜಿತ್, ಸಿಐ ಪಿ.ಕೆ. ಸುಧಾಕರನ್, ಎಸ್‌ಐ ಎಂ. ರಾಜೇಶ್ ಎಂಬವರು ಒಳಗೊಂಡಿದ್ದ ವಿಶೇಷ ಪೊಲೀಸರ ತಂಡ ಈ ಕೊಲೆ ಪ್ರಕರಣದ ತನಿಖೆ ನಡೆಸಿತ್ತು. ನಂತರ ಸಿಐ ಪಿ.ಕೆ. ಸುಧಾಕರನ್ ನ್ಯಾಯಾಲಯದಲ್ಲಿ ಈ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕೊಲೆ ಪ್ರಕರಣದ ಆರೋಪಿಗಳಲ್ಲೋರ್ವನಾಗಿದ್ದ ಜ್ಯೋತಿಷ್ ವರ್ಷಗಳ ಹಿಂದೆ ಆತ್ಮಹತ್ಯೆಗೈದಿದ್ದರು. ಇನ್ನೋರ್ವ ಆರೋಪಿ ಮಹೇಶ್ ವಿರುದ್ಧ ಕಾಪಾ ಕಾನೂನು ಪ್ರಕಾರ ಸೆರೆಮನೆವಾಸವನ್ನು ಅನುಭವಿಸುತ್ತಿದ್ದಾನೆ.

RELATED NEWS

You cannot copy contents of this page