ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವಿನಲ್ಲಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗೆ ಕಾಸರಗೋಡು ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕರ್ನಾಟಕದ ದಾವಣಗೆರೆ ಹಾರಪ್ಪನ ಹಳ್ಳಿಯ ರಾಮ್ ನಾಯ್ಕ್ ಯಾನೆ ರಮೇಶ್ (31) ಎಂಬಾತನನ್ನು ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಎಂ.ವಿ. ವಿಷ್ಣು ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ತಂಡ ಬಂಧಿಸಿದೆ.
ಕರ್ನಾಟಕದ ಹೊಸಪೇಟೆ ಲಿಂಗನಾಯಕನ ಹಳ್ಳಿ ನಿವಾಸಿ ದಿ| ಪಿರಾ ನಾಯ್ಕರ ಪುತ್ರ ರಮೇಶ್ (38) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ರಾಮ್ ನಾಯ್ಕನನ್ನು ಬಂಧಿಸಲಾಗಿದೆ. ಕೊಲೆ ಕೃತ್ಯದ ಬಳಿಕ ಹೊಸಂಗಡಿ ಯಿಂದ ಪರಾರಿಯಾಗಿ ಮಂಗಳೂರು ಪಡೀಲ್ ಎಂಬಲ್ಲಿಗೆ ಆರೋಪಿ ತಲುಪಿದ್ದನು. ಅಲ್ಲಿಂದ ಸ್ವಂತ ಊರಿಗೆ ತೆರಳಲು ಯತ್ನಿಸುತ್ತಿದ್ದಂತೆ ಶನಿವಾರ ರಾತ್ರಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಸ್ಐಗಳಾದ ಶಬರೀಕೃಷ್ಣನ್, ಅರ್ಜುನ್, ಸ್ಕ್ವಾಡ್ ಸದಸ್ಯರಾದ ಸುಧಾಕರನ್, ಸಜಿತ್ ರಾಜೇಶ್, ಜಿನೇಶ್ ಎಂಬಿವರಿದ್ದರು.
ಅಂಗಡಿಪದವಿನ ಹಳೆಯ ಎರಡಂತಸ್ತಿನ ಮನೆಯೊಳಗೆ ಶುಕ್ರವಾರ ರಾತ್ರಿ ೭ ಗಂಟೆಗೆ ರಮೇಶ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಮಂಜೇಶ್ವರ ಇನ್ಸ್ಪೆಕ್ಟರ್ ವಿಷ್ಣು ಪ್ರಸಾದ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದಾಗ ಇದು ಕೊಲೆಕೃತ್ಯವೆಂದು ಸಾಬೀತುಗೊಂಡಿತ್ತು. ಇದರಂತೆ ನಡೆಸಿದ ತನಿಖೆಯಲ್ಲಿ ಆರೋಪಿಯ ಕುರಿತು ಮಾಹಿತಿ ಲಭಿಸಿದೆ. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಘಟನೆಯ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೀಡಾದ ರಮೇಶ ಹಾಗೂ ಆರೋಪಿ ರಾಮ್ ನಾಯ್ಕ ಸ್ನೇಹಿತರಾಗಿದ್ದರು. ಘಟನೆ ದಿನದಂದು ಸಂಜೆ ಅವರಿಬ್ಬರು ಮದ್ಯ ಸೇವಿಸಿದ್ದರು. ಈ ವೇಳೆ ಹಣದ ವಿಷಯದಲ್ಲಿ ಉಂಟಾದ ವಾಗ್ವಾದದಿಂದ ರಮೇಶ ರನ್ನು ಇರಿದು ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ರಾಮ್ ನಾಯ್ಕ್ ಅಲ್ಲಿಂದ ಪರಾರಿಯಾಗಿದ್ದನು. ಈ ಮನೆಯಲ್ಲಿ ವಾಸಿಸುತ್ತಿದ್ದ ಇನ್ನೋರ್ವ ಕಾರ್ಮಿಕ ಕೃಷ್ಣಪ್ಪ ಶುಕ್ರವಾರ ಸಂಜೆ ಅಲ್ಲಿಗೆ ತಲುಪಿ ನೋಡಿದಾಗ ರಮೇಶ ಅಡುಗೆ ಕೋಣೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದು ಕಂಡುಬಂದಿತ್ತು.
ರಮೇಶರ ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಎದೆಗೆ ಉಂಟಾದ ಆಳದ ಗಾಯ ಸಾವಿವಿಗೆ ಕಾರಣವಾ ಗಿದೆಯೆಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಮೃತದೇಹವನ್ನು ಸಂಬಂಧಿಕರು ಊರಿಗೆ ಕೊಂಡೊಯ್ದ ಅಂತ್ಯ ಸಂಸ್ಕಾರ ನಡೆಸಲಾಯಿತು.






