ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ತಲಪಾಡಿ- ಚೆಂಗಳ ರೀಚ್ ಉದ್ಘಾಟಿಸಲ್ಪಟ್ಟಿತಾದರೂ ಕಾಲ್ನಡೆ ಪ್ರಯಾಣಿಕರ ಸಂಕಷ್ಟ ಅಪಾಯಕರವಾದ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಆರೋಪಿಸಲಾಗಿದೆ. ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಕಾಲ್ನಡೆ ದಾರಿ ಹಾನಿಗೊಂಡ ಸ್ಥಿತಿಯಲ್ಲಿದೆ. ಮಳೆಯ ಆಗಮನದೊಂದಿಗೆ ಇಲ್ಲಿ ಇನ್ನಷ್ಟು ಸಮಸ್ಯೆ ತಲೆದೋರಲಿದೆ. ಕಾಲ್ನಡೆ ಪ್ರಯಾಣಿಕರ ವಿಷಯದಲ್ಲಿ ಸುಪ್ರೀಂಕೋರ್ಟ್ ಕಠಿಣ ನಿಲುವು ತಳೆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣು ತೆರೆದಿತ್ತು. ಈ ಹಿನ್ನೆಲೆಯಲ್ಲಿ ಕಾಲ್ನಡೆ ದಾರಿಯನ್ನು ನಿರ್ಮಿಸಲಾಗಿದೆ. ಆದರೆ ಇದನ್ನು ಕಳಪೆ ರೀತಿಯಲ್ಲಿ ನಿರ್ಮಿಸಲಾಗಿದ್ದು, ಮಣ್ಣಿನ ಮೇಲೆ ಇಂಟರ್‌ಲಾಕ್ ಹಾಕಲಾಗಿದೆ. ಇದು ಈಗ ಬಿರುಕು ಬಿಟ್ಟ ಸ್ಥಿತಿಯಲ್ಲಿದೆ.ಈ ಕಾಮಗಾರಿಯಲ್ಲಿ ಭಾರೀ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದುಈ ಮೊದಲೇ ಆರೋಪ ಕೇಳಿ ಬಂದಿತ್ತು. ಇಕ್ಕಟ್ಟಾದ ಸರ್ವೀಸ್ ರಸ್ತೆಯಲ್ಲಿ ಎರಡು ವಾಹನಗಳು ಸಂಚರಿಸುವಾಗ ಒಂದು ವಾಹನ ಕಾಲ್ನಡೆ ದಾರಿ ಮೂಲಕ ಸಂಚರಿಸಬೇಕಾಗುತ್ತಿದ್ದು, ಇದರಿಂದಾಗಿಯೂ ಕಾಲ್ನಡೆ ದಾರಿ ಹಾನಿಗೊಳ್ಳುತ್ತಿದೆ. ಬಾರೀ ಭಾರದ ವಾಹನಗಳು ಕಾಲ್ನಡೆ ದಾರಿಯಲ್ಲಿ ಸಂಚರಿಸುವಾಗ ರಸ್ತೆ ಹಾನಿಗೀಡಾಗು ತ್ತಿದೆ ಎಂದು ದೂರಲಾಗಿದೆ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಲೋಪದೋಷಗಳನ್ನು ಪರಿಶೀಲಿಸುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಮಟ್ಟದ ತಜ್ಞರ ತಂಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಳೆದ ವರ್ಷ ತಪಾಸಣೆ ನಡೆಸಿದೆಯಾದರೂ ಯಾವುದಕ್ಕೂ ಪರಿಹಾರ ಉಂಟಾಗಿಲ್ಲವೆನ್ನಲಾಗಿದೆ. ನಿರ್ಮಾಣ ಮುಂದುವರಿಯುತ್ತಿರುವ ಚೆರ್ಕಳ- ನೀಲೇಶ್ವರ ರೀಚ್‌ನ ಹಲವು ಕಡೆಗಳಲ್ಲೂ ಈಗಲೂ ಗುಡ್ಡೆ ಕುಸಿತ ಮುಂದುವರಿಯುತ್ತಿದೆ. ಮಳೆ ತೀವ್ರಗೊಳ್ಳುವುದರೊಂದಿಗೆ ಇದು ಇನ್ನಷ್ಟು ಬಿಗಡಾಯಿಸಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.






