ಪಾಟ್ನಾ: ಬಿಹಾರ ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಜಯಭೇರಿಯತ್ತ ಸಾಗತೊಡಗಿದೆ. ಆ ಮೂಲಕ ತನ್ನ ಆಡಳಿತವನ್ನು ಮತ್ತೆ ನಿರಾತಂಕವಾಗಿ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.
ಒಟ್ಟು 243 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 122 ಸದಸ್ಯರ ಬಲ ಬೇಕಾಗಿದೆ. ಈತನಕ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 200 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ತನ್ನ ಅಧಿಕಾರವನ್ನು ಪ್ರಚಂಡ ಬಹುಮತದೊಂದಿಗೆ ಉಳಿಸಿಕೊಳ್ಳುವತ್ತ ಸಾಗತೊಡಗಿದೆ. ಕಾಂಗ್ರೆಸ್ ನೇತೃತ್ವದ ಮಹಾ ಘಟ್ ಬಂಧನ್ ಈ ಚುನಾವಣೆ ಯಲ್ಲಿ ಮಹಾಪತನದತ್ತ ಸಾಗುತ್ತಿರುವುದು ಇದುವರೆಗಿನ ಫಲಿತಾಂಶದಲ್ಲಿ ಕಂಡುಬಂದಿದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ 125 ಮತ್ತು ಮಹಾಘಟ್ ಬಂಧನ್‌ಗೆ 110 ಸ್ಥಾನಗಳು ಲಭಿಸಿತ್ತು. ಕಳೆದ ಬಾರಿಗಿಂ ತಲೂ ಈ ಬಾರಿ ಎನ್‌ಡಿಎಗೆ ೫೦ರಷ್ಟು ಹೆಚ್ಚು ಸ್ಥಾನ ಲಭಿಸುವ ಸೂಚನೆಯನ್ನು ಚುನಾವಣಾ ಫಲಿತಾಂಶ ನೀಡುತ್ತಿದೆ.
ಕಾಂಗ್ರೆಸ್ ನೇತೃತ್ವದ ಮಹಾಘಟ್ ಬಂಧನ್‌ಗೆ ಕನಿಷ್ಠ 100ರಷ್ಟಾದರೂ ಸ್ಥಾನ ಲಭಿಸದೇ ಇರುವ ಸ್ಥಿತಿ ನಿರ್ಮಾಣವಾಗಿದೆ.
ಈತನಕ ಹೊರಬಂದ ಫಲಿತಾಂಶದ ಪ್ರಕಾರ ಎನ್‌ಡಿಎ-200, ಮಹಾಘಟ್ ಬಂಧನ್ 40 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇದೇ ಮೊದಲ ಬಾರಿಯಾಗಿ ಸ್ಪರ್ಧಿಸಿದ ಪ್ರಶಾಂತ್ ಕಿಶೋರ್‌ರ ಪಕ್ಷಕ್ಕೆ ಕನಿಷ್ಠ ಒಂದು ಸೀಟಲ್ಲಾದರೂ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. ಈಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 67.13ರಷ್ಟು ಮತದಾನ ನಡೆದಿದ್ದು, ಇದು ದಾಖಲೆಯಾಗಿದೆ. ನವಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, 2616 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆ ಕುರಿತು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿ ಕೂಟಕ್ಕೆ ಗೆಲುವು ಖಚಿತ ಎಂದು ಹೇಳಿದ್ದವು.







