ಕುಂಬ್ಡಾಜೆ: ಶಾಲಾ ವಿದ್ಯಾರ್ಥಿಗಳು ಸಹಿತ ಸ್ಥಳೀಯರು ನಿರಂತರ ಆಶ್ರಯಿಸುವ ತೂಗುಸೇತುವೆಯೊಂದು ಜೀರ್ಣಾವಸ್ಥೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಭೀತಿ ಸೃಷ್ಟಿಯಾಗಿದೆ. ಕುಂಬ್ಡಾಜೆ ನೇರಪ್ಪಾಡಿಯನ್ನು ಸಂಪರ್ಕಿಸುವ ಈ ತೂಗುಸೇತುವೆ ಜೀರ್ಣಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ಹಲವಾರು ಬಾರಿ ಪಂಚಾಯತ್ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಉಂಟಾಗಿಲ್ಲ. ಅಧಿಕಾರಿಗಳು ಈ ಸೇತುವೆಯ ಬಗ್ಗೆ ನಿರಾಸಕ್ತಿ ವಹಿಸುತ್ತಿರುವುದಾಗಿಯೂ ದೂರಲಾಗಿದೆ. ದಿನಂಪ್ರತಿ ೧೦೦ಕ್ಕೂ ಅಧಿಕ ಪ್ರಯಾಣಿಕರು ಈ ಮೂಲಕ ಸಾಗುತ್ತಿದ್ದಾರೆ. ಹಲವಾರು ಶಾಲೆಗಳಿಗೆ ವಿದ್ಯಾರ್ಥಿಗಳು, ವಿವಿಧ ಕೆಲಸಗಳಿಗೆ ತೆರಳುವವರು ಈ ತೂಗುಸೇತುವೆ ಮೂಲಕವೇ ಸಂಚರಿಸುತ್ತಿದ್ದು, ಯಾವುದೇ ಕ್ಷಣ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಶ್ರೀಘ್ರವೇ ತೂಗುಸೇತುವೆಯನ್ನು ದುರಸ್ತಿಗೊಳಿಸಿ ಸ್ಥಳೀಯರ ಭೀತಿಯನ್ನು ದೂರ ಮಾಡಬೇಕೆಂದು ಆಗ್ರಹಿಸಲಾಗಿದೆ.







