ಹೊಸ ಸಚಿವಸಂಪುಟ ಜಿಲ್ಲೆಯ ಪಾಲಿಗೆ ನಿರಾಶೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಆರು ದಶಕಗಳ ಬಳಿಕ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಎಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಜಿಲ್ಲೆಯ ಪಾಲಿಗೆ ನಿರಾಶೆಯಷ್ಟೇ ಉಳಿದಿದೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆಗೆ ಮತ್ತೊಮ್ಮೆ ಪ್ರಾತಿನಿಧ್ಯವನ್ನು ನಿರಾಕರಿಸುವ ಮೂಲಕ, ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯ ಬಗ್ಗೆ ವಿ.ಡಿ ಸತೀಶನ್ ಅವರ ಸರಕಾರದ ಧೋರಣೆ ಏನಿರಲಿದೆ ಎಂಬುದು ಬಹುಮಟ್ಟಿಗೆ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಸಚಿವರನ್ನು ಆಯ್ಕೆ ಮಾಡುವುದು ಯುಡಿಎಫ್‌ನ ಆಂತರಿಕ ವಿಷಯವಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಸಮಸ್ಯೆಗಳನ್ನು ಸಚಿವ ಸಂಪುಟದಲ್ಲಿ ಬಲವಾಗಿ ಮಂಡಿಸಲು ಸಚಿವರಿದ್ದರೆ ಚೆನ್ನಾಗಿತ್ತು ಎಂಬುದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನ ಆಶಯವಾಗಿತ್ತು. ಎಷ್ಟೋ ದಶಕಗಳ ಬಳಿಕ ಜಿಲ್ಲೆಯಿಂದ ಕಾಂಗ್ರೆಸ್ ಶಾಸಕರು ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. ಕನಿಷ್ಠ ಈ ವಿಷಯವನ್ನಾದರೂ ಕಾಂಗ್ರೆಸ್ ನಾಯಕತ್ವ ಪರಿಗಣಿಸಬೇಕಿತ್ತು.
ವೆಂಟಿಲೇಟರ್ ಸ್ಥಿತಿಯ ಲ್ಲಿರುವ ಜಿಲ್ಲೆಯ ಸರಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇನ್ನು ಮುಂದೆಯೂ ಅಗತ್ಯ ನಿಧಿ ಮತ್ತು ಬೆಂಬಲ ಸಿಗಬೇಕಾದ ಪರಿಸ್ಥಿತಿ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಅಗತ್ಯತೆಗಳು ಮತ್ತೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬ ಆತಂಕ ಮೂಡುತ್ತಿದೆ ಎಂದು ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ.

You cannot copy contents of this page