ಶಬರಿಮಲೆ: ಶಬರಿಮಲೆಯಲ್ಲಿ ಹೊಸತಾಗಿ ಅಧಿಕಾರ ವಹಿಸಿಕೊಂಡ ಅರ್ಚಕ ಇ.ಡಿ. ಪ್ರಸಾದ್ ನಂಬೂದಿರಿಯವರ ನೇತೃತ್ವದಲ್ಲಿ ಗರ್ಭಗುಡಿಯ ಬಾಗಿಲು ತೆರೆಯುವುದರೊಂದಿಗೆ ವೃಶ್ಚಿಕ ಮಾಸದ ಮೊದಲ ಮುಂಜಾನೆ ಶಬರಿಮಲೆಯಲ್ಲಿ ದರ್ಶನಕ್ಕಾಗಿ ನೂರಾರು ಭಕ್ತರು ತಲುಪಿದರು. ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅವರ ಉಪಸ್ಥಿತಿಯಲ್ಲಿ ನಡೆ ಬಾಗಿಲು ತೆಗೆದಾಗ ಶರಣು ಘೋಷಗಳು ಮೊಳಗಿತು. ದೇವಸ್ವಂಬೋರ್ಡ್ ಕಾರ್ಯದರ್ಶಿ ಪಿ.ಎನ್. ಗಣೇಶ್ವರನ್ ಪೋತ್ತಿ, ಎಕ್ಸಿಕ್ಯೂಟಿವ್ ಆಫೀಸರ್ ಒ.ಜಿ. ಬಿಜು ಉಪಸ್ಥಿತರಿದ್ದರು. ಮುಂಜಾನೆ 3 ಗಂಟೆಗೆ ನಡೆ ಬಾಗಿಲು ತೆರೆಯಲಾಗಿದೆ. ಬಳಿಕ ನಿರ್ಮಾಲ್ಯ ಅಭಿಷೇಕ, ಗಣಪತಿ ಹೋಮ, ತುಪ್ಪಾಭಿಷೇಕ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಗರ್ಭಗುಡಿಯ ಬಾಗಿಲು ಮುಚ್ಚಿ ಅಪರಾಹ್ನ 3 ಗಂಟೆಗೆ ತೆರೆದು ರಾತ್ರಿ 11 ಗಂಟೆಗೆ ಹರಿವರಾಸನಂನೊಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.







