ಉಪ್ಪಳದಲ್ಲಿ ಗಲ್ಫ್ ಉದ್ಯೋಗಿ ಮನೆಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಹೊಸ ತಿರುವು: ಗುಂಡು ಹಾರಿಸಿದ್ದು ಮನೆಯೊಡೆಯನ 14ರ ಹರೆಯದ ಪುತ್ರ

ಉಪ್ಪಳ:  ಉಪ್ಪಳದಲ್ಲಿ ಗಲ್ಫ್ ಉದ್ಯೋಗಿಯ ಮನೆಗೆ  ಗುಂಡು ಹಾರಿಸಲಾಯಿತೆಂಬ  ಪ್ರಕರಣಕ್ಕೆ ಹೊಸ ತಿರುವು ಮೂಡಿದೆ.  ಗುಂಡು ಹಾರಿಸಿರುವುದು ಮನೆ ಮಾಲಕನ ೧೪ರ ಹರೆಯದ ಪುತ್ರನಾಗಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ನಾಗರಿಕರು ಹಾಗೂ ಪೊಲೀಸರನ್ನು ಕಾಡುತ್ತಿದ್ದ ಆತಂಕ ದೂರವಾಗಿದೆ.  ನಿನ್ನೆ ಸಂಜೆ ಪೊಲೀಸರು ನಡೆಸಿದ ತನಿಖೆ ವೇಳೆ ಬಾಲಕ ಘಟನೆಯ ಸತ್ಯಾವಸ್ಥೆಯನ್ನು ಬಹಿರಂಗಪಡಿಸಿ ದ್ದಾನೆ. ಗುಂಡು ಹಾರಿಸಲು ಬಳಸಿದ ಏರ್‌ಗನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಮೊನ್ನೆ ಸಂಜೆ ಮನೆಗೆ ಗುಂಡು ಹಾರಿಸಿರುವುದಾಗಿ ದೂರು ಕೇಳಿಬಂದಿತ್ತು. ಘಟನೆ ವೇಳೆ  ಗಲ್ಫ್ ಉದ್ಯೋಗಿಯಾದ ಮನೆ ಮಾಲಕನ ಪುತ್ರನಾದ  14ರ ಹರೆಯದ ಬಾಲಕ ಮಾತ್ರವೇ ಮನೆಯಲ್ಲಿದ್ದನು. ಬಾಲಕನ ತಾಯಿ ಹಾಗೂ ಓರ್ವ ಸಹೋದರ, ಸಹೋದರಿ ವಿವಿಧ ಅಗತ್ಯಗಳಿಗಾಗಿ ಹೊರಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಗುಂಡು ಹಾರಾಟ ನಡೆದಿದೆ.  ಬಾಲಕ ನೀಡಿದ ಮಾಹಿತಿ ಪ್ರಕಾರ ಮನೆಯವರು ಮಂಜೇಶ್ವರ ಪೊಲೀಸರಿಗೆ ವಿಷಯ ತಿಳಿಸಿದ್ದರು. ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಅಂದು ರಾತ್ರಿಯೇ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದರು. ಮನೆಯ ಎರಡಂತಸ್ತಿನ ಕೊಠಡಿಯ  ಕಿಟಿಕಿ ಗಾಜುಗಳು ಗುಂಡು ತಾಗಿ ಪುಡಿಗೈಯ್ಯಲ್ಪಟ್ಟಿದೆ. ನಿನ್ನೆ ಮಧ್ಯಾಹ್ನ ಫಾರೆನ್ಸಿಕ್ ತಜ್ಞರು ಕೂಡಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದರು. ಕಾರಿನಲ್ಲಿ ತಲುಪಿದ ನಾಲ್ಕು ಮಂದಿ   ಗುಂಡು ಹಾರಿಸಿರುವುದಾಗಿ ಬಾಲಕ ಮನೆಯವರಲ್ಲಿ ತಿಳಿಸಿದ್ದನು. ಪೊಲೀಸರು  ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದಾಗ ಘಟನೆ ವೇಳೆ ಯಾವುದೇ ವಾಹನ ಆ ಮನೆ ಭಾಗಕ್ಕೆ ಬಂದಿರುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಘಟನೆ ಬಗ್ಗೆ ನಿಗೂಢತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ನಿನ್ನೆ ಅಪರಾಹ್ನ ಠಾಣೆಗೆ ಕರೆಸಿ ವಿಚಾರಿಸಿದ್ದರು.  ಈ ವೇಳೆ ಬಾಲಕ ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ತಂದೆಯ ಏರ್‌ಗನ್ ತೆಗೆದು  ಗುಂಡು ಹಾರಿಸಿರುವುದಾಗಿ   ಪೊಲೀಸರಲ್ಲಿ ತಿಳಿಸಿದ್ದಾನೆ. ಆದರೆ ಈ ವಿಷಯ ಮನೆಯವರಿಗೆ ತಿಳಿದಿಲ್ಲವೆಂದು ಅಂದಾಜಿಸಲಾಗಿದೆ.  ಬಾಲಕ ನೀಡಿದ ಮಾಹಿತಿಯಂತೆ ಮನೆಯವರು ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಲಾಗುತ್ತಿದೆ.  ಗುಂಡು ಹಾರಿಸಿದ ಬಾಲಕನ ವಿರುದ್ಧ ಕೇಸು ದಾಖಲಿಸಬೇಕೇ ಎಂದು ಶೀಘ್ರ ನಿರ್ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page