ಕುಖ್ಯಾತ ಕಳವು ಆರೋಪಿ ನೆಲ್ಲಿಕಟ್ಟೆಯ ಉಮ್ಮರ್ ಫಾರೂಕ್ ಬಂಧನ

ಕುಂಬಳೆ: ಕುಖ್ಯಾತ ಕಳವು ಆರೋಪಿಯಾದ ನೆಲ್ಲಿಕಟ್ಟೆ ನಿವಾಸಿ ಉಮ್ಮರ್ ಫಾರೂಕ್ (46)  ಸೆರೆಗೀಡಾಗಿದ್ದಾನೆ. ಈತ ಕಾಸರಗೋಡು, ದ.ಕ ಜಿಲ್ಲೆ ಸಹಿತ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವುಗೈಯ್ಯುವ ತಂಡದ ಮುಖ್ಯ ಸೂತ್ರಧಾರನಾಗಿದ್ದಾನೆ.  ಕಳೆದ ತಿಂಗಳ 29ರಂದು ಮಾವಿನಕಟ್ಟೆಯ ಕ್ಷೇತ್ರದಿಂದ ಕಾಣಿಕೆ ಹುಂಡಿಗಳನ್ನು ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಹಲವು ತಿಂಗಳಿಂದ ಕರ್ನಾಟಕ ಪೊಲೀಸರು ಹಾಗೂ ಕೇರಳ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.  ಹಗಲು ಹೊತ್ತಿನಲ್ಲಿ ಎಲ್ಲಾದರೂ ಅಡಗಿ ಕುಳಿತು ರಾತ್ರಿ ವೇಳೆ  ಹೊರಗಿಳಿದು ಕಳವು ನಡೆಸುವುದು ಉಮ್ಮರ್ ಫಾರೂಕ್‌ನ ಜೀವನ ರೀತಿಯಾಗಿದೆ.  ಮುಳ್ಳೇರಿಯ ಪಳ್ಳ ಎಂಬಲ್ಲಿಂದ ಬಾಡಿಗೆಗೆ ಪಡೆದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸಹಚರನಾದ ಮುಳ್ಳೇರಿಯ ಪಳ್ಳ ನಿವಾಸಿ ಸಾಬಿತ್‌ನೊಂದಿಗೆ ಸೇರಿ  ಮಾವಿನಕಟ್ಟೆಯ ಕ್ಷೇತ್ರವೊಂದರ ಕಾಣಿಕೆ ಹುಂಡಿಗಳನ್ನು ಈತ ಕಳವು ನಡೆಸಿದ್ದನು. ಅನಂತರ ಅಲ್ಲಿಂದ ಅದೇ ವಾಹನದಲ್ಲಿ  ಮರಳಿದ ಆರೋಪಿ ಮುಳ್ಳೇರಿಯದ ಮನೆಯೊಂದರಿಂದ ಎರಡು ಕ್ವಿಂಟಾಲ್ ಅಡಿಕೆಯನ್ನು ಕಳವು ನಡೆಸಿದ್ದನು. ಈ ಪ್ರಕರಣದಲ್ಲಿ ಆರೋಪಿಯಾದ ಸಾಬಿತ್‌ನನ್ನು ಬದಿಯಡ್ಕ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಸಾಬಿತ್ ಈಗ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದಾನೆ. ಇದೀಗ ಸೆರೆಗೀಡಾದ ಉಮ್ಮರ್ ಫಾರೂಕ್ ಕುಂಬಳೆ ಠಾಣೆಯಲ್ಲಿ ದಾಖಲಾದ  ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

 ಮೊಬೈಲ್ ಫೋನ್ ಬಳಸಿದರೆ ಪೊಲೀಸರು ಪತ್ತೆಹಚ್ಚಿ ಸೆರೆಹಿಡಿಯು ವರೆಂದು ತಿಳಿದಿದ್ದ ಆರೋಪಿ  ಮೊಬೈಲ್ ಫೋನ್ ಉಪಯೋಗಿಸುತ್ತಿ ರಲಿಲ್ಲ. ಬದಲಾಗಿ ದಾರಿಯಲ್ಲಿ ಕಾಣಸಿಗುವ ಯಾರಿಂದಲಾದರೂ ಮೊಬೈಲ್ ಪಡೆದು ಮನೆಯವರೊಂದಿಗೆ ಮಾತನಾಡುತ್ತಿದ್ದನು.  ಮದ್ಯಪಾನದ ಚಟ ಹೊಂದಿರುವ ಆರೋಪಿ  ಕಾಞಂಗಾಡ್‌ನ   ಬಾರ್‌ವೊಂದರ ಸಮೀಪ ನಿಂತಿದ್ದ ಸಂದರ್ಭದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.  ಆರೋಪಿ ಅಲ್ಲಿಂದ  ವ್ಯಕ್ತಿಯೋರ್ವನಿಗೆ ಮಾಡಿದ ಫೋನ್ ಕರೆಯನ್ನು ಗುರುತಿಸಿ ಪೊಲೀಸರು ಅಲ್ಲಿಗೆ ತಲುಪಿದ್ದರು. ಅಷ್ಟರಲ್ಲಿ ಆರೋಪಿ ಅಲ್ಲಿಂದ ಓಡಿಹೋಗಿದ್ದನು. ಬಳಿಕ  ಬಾರ್‌ನ ಹಿಂಬದಿಯಲ್ಲಿರುವ ಪೊದೆಗಳೆಡೆಯಲ್ಲಿ  ಆರೋಪಿ ಅವಿತುಕೊಂಡಿದ್ದನು. ಪೊಲೀಸರು ಅಲ್ಲಿಂದ ಅತಿ ಸಾಹಸಿಕವಾಗಿ ಆರೋಪಿಯನ್ನು ಬಂಧಿಸಿದ್ದಾರೆ.

ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣನ್, ಎಸ್‌ಐ ಅಭಿಜಿತ್, ಎಎಸ್‌ಐ ಪ್ರಸಾದ್ ಪುಲ್ಲೂರು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೋಕುಲ್, ಶ್ರೀಜಿತ್, ಸಿವಿಲ್ ಪೊಲೀಸ್ ಆಫೀಸರ್ ಶ್ರೀನೇಶ್ ಎಂಬಿವರು ಆರೋಪಿಯನ್ನು ಸೆರೆಹಿಡಿದ ತಂಡದಲ್ಲಿದ್ದರು. 

You cannot copy contents of this page