ಕಾಸರಗೋಡು: ಕುಖ್ಯಾತ ಕಳವು ಆರೋಪಿ ತೊರಪ್ಪನ್ ಸಂತೋಷ್ ಮತ್ತೆ ಸೆರೆಗೀಡಾಗಿದ್ದಾನೆ. ಇಂದು ಮುಂಜಾನೆ ಮೇಲ್ಪರಂಬ ಹಳೆಯ ಮಿಲ್ಮಾ ಬೂತ್ ಸಮೀಪದ ಕ್ಯಾಶ್‌ಮಾರ್ಟ್ ಹೈಪರ್ ಮಾರ್ಕೆಟ್‌ನಲ್ಲಿ ಕಳವು ನಡೆಸಲು ಯತ್ನಿಸುತ್ತಿದ್ದ ವೇಳೆ ತೊರಪ್ಪನ್ ಸಂತೋಷ್‌ನನ್ನು ನಾಗರಿಕರು ಸೆರೆ ಹಿಡಿದಿದ್ದಾರೆ.
ನಾಗರಿಕರ ಕೈಯಿಂದ ತಪ್ಪಿಸಿಕೊಳ್ಳಲು ಈತ ಸೂಪರ್ ಮಾರ್ಕೆಟ್ ಕಟ್ಟಡದ ಒಂದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಇದರಿಂದ ಕಾಲಿಗೆ ಗಾಯಗೊಂಡಿದ್ದ ಈತ ಓಡಲು ಸಾಧ್ಯವಾಗದೆ ನಾಗರಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾದ ತೊರಪ್ಪನ್ ಸಂತೋಷ್ ಕುಡಿಯಾನ್‌ಮಲ ಪೊಲೀಸ್‌ಠಾಣೆ ವ್ಯಾಪ್ತಿಯ ಪುಲಿಕುರುಂಬ ನಿವಾಸಿಯಾಗಿದ್ದಾನೆ. ನಿನ್ನೆ ರಾತ್ರಿ 9 ಗಂಟೆ ವೇಳೆ ಸಂತೋಷ್ ಮೇಲ್ಪರಂಬಕ್ಕೆ ತಲುಪಿದ್ದನು. ಇಂದು ಮುಂಜಾನೆ 1 ಗಂಟೆವರೆಗೆ ಸಮೀಪದ ಪೊದೆಗಳೆಡೆಯಲ್ಲಿ ಅಡಗಿ ಕುಳಿತಿದ್ದನು. ಕಳವು ನಡೆಸಲು ಸೂಕ್ತ ಸಮಯವನ್ನು ಕಂಡುಕೊಂಡ ಈತ ಅಂಗಡಿಯ ಶಟರ್‌ನ ಬೀಗ ಮುರಿದು ಒಳಗೆ ಪ್ರವೇಶಿಸಿ ಕ್ಯಾಶ್ ಕೌಂಟರ್‌ನಿಂದ 3000 ರೂಪಾಯಿ ತೆಗೆದಿದ್ದಾನೆ. ಅಂಗಡಿಯ ಸಮೀಪದಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕೊಂಡೊಯ್ಯಲು ಯುವಕರು ತಲುಪಿದಾಗ ಅಂಗಡಿಯ ಒಳಗಿನಿಂದ ಶಬ್ದ ಕೇಳಿ ಬಂದಿತ್ತು. ಈ ಬಗ್ಗೆ ಯುವಕರು ನಾಗರಿಕರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳೀಯರು ತಲುಪಿ ಕಟ್ಟಡವನ್ನು ಸುತ್ತುವರಿದಾಗ ಪರಾರಿಯಾಗಲು ತೊರಪ್ಪನ್ ಸಂತೋಷ್ ಕಟ್ಟಡದ 1ನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಈ ವೇಳೆ ಕಾಲಿಗೆ ಗಾಯಗೊಂಡುದರಿಂದ ಪರಾರಿಯಾಗಲು ಸಾಧ್ಯವಾಗಲಿಲ್ಲ. ಅಂಗಡಿ ಮಾಲಕ ಕೆ. ಅನೂಪ್‌ರ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.







