ಮಂಜೇಶ್ವರ: ರಾಜ್ಯದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳನ್ನು ಕಾಸರಗೋಡಿಗೆ ತಲುಪಿಸಿ ಮಾರಾಟಗೈಯ್ಯುವ ದಂಧೆ ಮತ್ತೆ ತೀವ್ರಗೊಂಡಿದೆ. ನಿನ್ನೆ ಮಂಜೇಶ್ವರ ಪೊಲೀಸರು ತಲಪಾಡಿಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ೬೦೦೦ ಪ್ಯಾಕೆಟ್ ಪಾನ್‌ಮಸಾಲೆ ಪತ್ತೆಹಚ್ಚಲಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ಕಣ್ಣೂರು ಕೊಳಚ್ಚೇರಿ ಕಂಡಪ್ಪನ್ ಕಂಬಿಲ್ ತೇರು ನೋರ್ತ್‌ನ ಅನಿರುದ್ಧನ್ ಕೆ. (53) ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 11 ಗಂಟೆ ವೇಳೆ ತಲಪಾಡಿ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಗಳೂರು ಭಾಗದಿಂದ ಉಪ್ಪಳ ಭಾಗಕ್ಕೆ ಬರುತ್ತಿದ್ದ ಕಾರನ್ನು ತಪಾಸಣೆಗೈದಾಗ ಅದರ ಹಿಂಬದಿ ಸೀಟು ಹಾಗೂ ಢಿಕ್ಕಿಯಲ್ಲಿ ಎಂಟು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ಪಾನ್ ಮಸಾಲೆ ಪತ್ತೆಯಾಗಿದೆ.







