ಆವೇಶದ ಚುನಾವಣಾ ಪ್ರಚಾರಕ್ಕೆ ತೆರೆ

ಕಾಸರಗೋಡು: ಕೇರಳ ವಿಧಾನಸಭೆಗೆ ನಾಳೆ ನಡೆಯಲಿರುವ ಚುನಾವಣೆಯ ಆವೇಶಭರಿತ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ  6 ಗಂಟೆಗೆ ತೆರೆಬಿದ್ದಿದೆ.

ಕೊನೆಯ ದಿನವಾದ ನಿನ್ನೆ ಸಂಜೆ ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ ಅಭ್ಯರ್ಥಿಗಳ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಆವೇಶಭರಿತ ಹಾಗೂ ಆಕರ್ಷಕ ರೀತಿಯ ರೋಡ್‌ಶೋಗಳು ನಡೆದವು.

ಕಾರ್ಯಕರ್ತರು ಭಾರೀ ಆವೇಶಭರಿತವಾಗಿ ತಮ್ಮ  ಅಭ್ಯರ್ಥಿಗಳ ಪರ ಮುಗಿಲು ಮುಟ್ಟುವ ಘೋಷಣೆ ಗಳೊಂದಿಗೆ ಪ್ರಚಾರದ ಕೊನೆಯ ಘಳಿಗೆ ತನಕ ಮತಯಾಚನೆ ನಡೆಸಿದರು. ಎಲ್ಲವೂ ಶಾಂತಿಯುತವಾದ ರೀತಿಯಲ್ಲೇ ನಡೆಯಿತು. ಪೊಲೀಸರು ಹಾಗೂ ಕೇಂದ್ರ ಪಡೆಗಳಿಂದ ಇದಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಯಿತು.

ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ನೇತೃತ್ವದ ರೋಡ್ ಶೋ ನಿನ್ನೆ ಸಂಜೆ ತಾಳಿಪಡ್ಪು ಮೈದಾನದಿಂದ ಆರಂಭಗೊಂಡು ಕರಂದಕ್ಕಾಡಿನಲ್ಲಿ ಸಮಾಪ್ತಿಗೊಂಡಿತು. ನಂತರ ಅಲ್ಲಿ ಅಬ್ಬರದ ಚುನಾವಣಾ ಪ್ರತಾರಕ್ಕೆ ಆವೇಶಭರಿತ ಅಂತಿಮ ಸ್ಪರ್ಶ ನೀಡಲಾಯಿತು. ಭಾರೀ ಸಂಖ್ಯೆಯ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದರು.

ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ನೇತೃತ್ವದ ರೋಡ್ ಶೋ ನಿನ್ನೆ ಸಂಜೆ ಚೆರ್ಕಳದಿಂದ ನೂರಾರು ವಾಹನಗಳ ಬೆಂಗಾವಲಿನೊಂದಿಗೆ ಆರಂಭಗೊಂಡು ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ  ಸಮಾಪ್ತಿಗೊಂಡಿತು. ನಂತರ ಅಲ್ಲಿ ಮುಗಿಲು ಮುಟ್ಟುವ ಘೋಷಣೆಗಳು ಹಾಗೂ ಮತಯಾಚನೆಯೊಂದಿಗೆ ಕಾವೇರಿದ  ಚುನಾವಣಾ ಪ್ರಚಾರಕ್ಕೆ ವಿದಾಯ ಹಾಡಲಾಯಿತು.

 ಎಡರಂಗ ಬೆಂಬಲಿತ ಉಮೇದ್ವಾರ ಶಾನವಾಸ್ ಪಾದೂರು ಅವರ ರೋಡ್ ಶೋ ಚೆರ್ಕಳದಿಂದ ಆರಂಭಗೊಂಡು ನಗರದ  ಹೊಸ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂ ಡಿತು.  ರೋಡ್ ಶೋನಲ್ಲಿ ನೂರಾರು ವಾಹನಗಳಲ್ಲಿ ಎಡರಂಗ ಕಾರ್ಯಕರ್ತರು ಜತೆಗೆ ಸಾಗಿದರು. ನಂತರ ಹೊಸ ಬಸ್ ನಿಲ್ದಾಣದಲ್ಲಿ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಎಳೆಯಲಾಯಿತು.

You cannot copy contents of this page