ಶಬರಿಮಲೆ ಚಿನ್ನ ಕಳವು ಪ್ರಕರಣದ ಕಾವು:  ಸ್ಪೀಕರ್ ಪೀಠದ ಮೇಲೇರಲು ಯತ್ನಿಸಿದ ವಿಪಕ್ಷೀಯ ಶಾಸಕರು; ವಿಧಾನಸಭೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ

ತಿರುವನಂತಪುರ: ಶಬರಿಮಲೆ ಚಿನ್ನ ಕಳವು ವಿಷಯದಲ್ಲಿ ಆಡಳಿತ ಮತ್ತು ವಿಪಕ್ಷೀಯರ ಮಧ್ಯೆ ತೀವ್ರ ವಾಗ್ವಾದ ಉಂಟಾಗಿ ಅದು ವಿಧಾನಸಭೆಯಲ್ಲಿ ಸಂಘರ್ಷಭರಿತ ವಾತಾವರಣ ಸೃಷ್ಟಿಸಿದ ನಾಟಕೀಯ ಬೆಳವಣಿಗೆ ಇಂದು ಬೆಳಿಗ್ಗೆ ನಡೆಯಿತು.  ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸರಕಾರ ಬುಡಮೇಲುಗೊಳಿಸಲೆತ್ನಿಸುತ್ತಿದೆಯೆಂದೂ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಸಹಜವಾದ ರೀತಿಯ ಜಾಮೀನು ಲಭಿಸುವಂತೆ ಮಾಡಲು ಮುಖ್ಯಮಂತ್ರಿಯವರ ಕಚೇರಿಗೆ  ಸಹಾಯ ಲಭಿಸುತ್ತಿದೆಯೆಂದು ಆರೋಪಿಸಿದ್ದರು. ಮಾತ್ರವಲ್ಲ ಇದರಿಂದಾಗಿ ನಾವು ವಿಧಾನಸಭಾ ಕಾರ್ಯಕಲಾಪಗಳೊಂದಿಗೆ ಸಹಕರಿಸುವುದಿಲ್ಲವೆಂದೂ ಘೋಷಿಸಿದರು. ಈ ಮಧ್ಯೆ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಆರೋಪ-ಪ್ರತ್ಯಾರೋಪಗಳು ಎದ್ದು ಅದು ಸದನದಲ್ಲಿ ಭಾರೀ ಬಿಗು ವಾತಾವರಣ ಸೃಷ್ಟಿಗೆ ದಾರಿಮಾಡಿಕೊಟ್ಟಿತು. ಈ ಮಧ್ಯೆ ವಿಪಕ್ಷೀಯ ಶಾಸಕರಾದ ಅನ್ವರ್ ಸಾದಾತ್ ಮತ್ತು  ಟಿ.ಪಿ. ಇಬ್ರಾಹಿಂ ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ವಿಧಾನಸಭಾ ಅಧ್ಯಕ್ಷರ ಪೀಠದ ಮೇಲೇರಲು ಯತ್ನಿಸಿದ್ದರು. ಆಗ ಅವರನ್ನು ವಿಧಾನಸಭೆಯ ವಾಚ್ ಆಂಡ್ ವಾರ್ಡ್ ಸಿಬ್ಬಂದಿಗಳು ತಡೆದರು. ಆಗ ಸದನದಲ್ಲಿ ಭಾರೀ ಘರ್ಷಣೆಯ ವಾತಾವರಣ ನಿರ್ಮಾಣಕ್ಕೂ ದಾರಿಮಾಡಿಕೊಟ್ಟಿತು. ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳತೊಡಗಿದಾಗ ಸ್ಪೀಕರ್ ಎ.ಎನ್.ಶಂಸೀರ್ ತಮ್ಮ ಪೀಠದಿಂದ ಎದ್ದು ಹೊರ ನಡೆದರು. ಇದರಿಂದಾಗಿ ವಿಧಾನಸಭೆಯ ಕಾರ್ಯಕಲಾಪಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.

You cannot copy contents of this page