ಕುಂಬಳೆ: ಕಾರಿನಲ್ಲಿ ತ್ಯಾಜ್ಯ ಕೊಂಡೊಯ್ದು ರಾಷ್ಟ್ರೀಯ ಹೆದ್ದಾರಿ ಬದಿ ಉಪೇಕ್ಷಿಸಿದ ವ್ಯಕ್ತಿಗೆ ಪಂಚಾಯತ್ ಕಾರ್ಯದರ್ಶಿ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮುಟ್ಟಂ ನಿವಾಸಿ ಮೋಣು ಎಂಬಾತನಿಗೆ ದಂಡ ವಿಧಿಸಿರುವುದಾಗಿ ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಶ್ರೀನಿವಾಸನ್ ತಿಳಿಸಿದ್ದಾರೆ. ಮೊನ್ನೆ ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರಿನಲ್ಲಿ ಸಂಚರಿಸಿದ ಮೋಣು ಶಿರಿಯ ಬಳಿಗೆ ತಲುಪಿದಾಗ ತ್ಯಾಜ್ಯವನ್ನು ಕಾರಿನಿಂದ ಹೊರಕ್ಕೆ ಎಸೆದಿ ದ್ದನೆನ್ನಲಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿದ ಇತರರು ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಮಂಗಲ್ಪಾಡಿ ಪಂ. ಅಧಿಕಾರಿಗಳಿಗೆ ಲಭಿಸಿತ್ತು. ಇದರಂತೆ ಪರಿಶೀಲನೆ ನಡೆಸಿದ ಪಂಚಾಯತ್ ಅಧಿಕಾರಿಗಳು ಕಾರಿನ ನಂಬ್ರವನ್ನು ಪತ್ತೆಹಚ್ಚಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಗುರುತುಹಚ್ಚಿ ಕಾನೂನುಕ್ರಮ ಕೈಗೊಂಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದೆಂದು ಪಂ. ಅಧಿಕಾರಿಗಳು ತಿಳಿಸಿದ್ದಾರೆ.
