ಕುಂಬಳೆ: ಸಾಲ ಕೊಟ್ಟ ವ್ಯಾಪಾರಿ ಯನ್ನು ಉಪಾಯದಿಂದ ಮನೆಗೆ ಕರೆಸಿ ಬೆಡ್ರೂಂನಲ್ಲಿ ವಿವಿಧ ರೀತಿಯ ಫೊಟೋ ತೆಗೆದು ಬ್ಲ್ಯಾಕ್ಮೇಲ್ ನಡೆಸಿ ಹಣ ಹಾಗೂ ಮೊಬೈಲ್ ಫೋನ್ ಲಪಟಾಯಿಸಿದ ಆರೋಪದಂತೆ ದಂಪತಿ ಸಹಿತ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಮುಟ್ಟಂ ಬಂಗರ ನಿವಾಸಿಯಾದ ೬೪ರ ಹರೆಯದ ವ್ಯಾಪಾರಿ ನೀಡಿದ ದೂರಿನಂತೆ ಕುಬಣೂರಿನ ರಿಸ್ವಾನ (28), ಈಕೆಯ ಪತಿ ಹಸ್ಸನ್ ಆಸಿಫ್ (33), ಸಂಬಂಧಿಕ ಮೊಗ್ರಾಲ್ ನಿವಾಸಿ ಮುಹ ಮ್ಮದ್ ಸಿರಾಜ್ (32) ಎಂಬಿವರನ್ನು ಬಂಧಿಸಲಾಗಿದೆ. ಇವರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಘಟನೆಗೆ ಸಂಬಂ ಧಿಸಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಈ ರೀತಿ ತಿಳಿಸಲಾಗಿದೆ. ಪ್ರಕರಣದಲ್ಲಿ ಒಂದನೇ ಆರೋಪಿಯಾದ ರಿಸ್ವಾನ ವಿದ್ಯುತ್ ಬಿಲ್ ಪಾವತಿಸಲೆಂದು ತಿಳಿಸಿ ದೂರುಗಾರನಿಂದ ಈ ಹಿಂದೆ 5000 ರೂಪಾಯಿ ಸಾಲ ಪಡೆದಿದ್ದಳು. ಈ ಹಣವನ್ನು ಮರಳಿ ನೀಡುವುದಾಗಿ ತಿಳಿಸಿ ಆಗಸ್ಟ್ 16ರಂದು ರಾತ್ರಿ 7.30ರ ವೇಳೆ ಯುವತಿ ವ್ಯಾಪಾರಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇದರಂತೆ ಆಕೆಯ ಮನೆಗೆ ತಲುಪಿದ ವ್ಯಾಪಾರಿ ಕಾರಿನಿಂದಿಳಿದು ಮನೆಯ ಸಿಟೌಟ್ಗೆ ಪ್ರವೇಶಿಸಿದೊಡನೆ ಯುವತಿ, ಪತಿ ಹಾಗೂ ಸಂಬಂಧಿಕ ಸೇರಿ ವ್ಯಾಪಾರಿಯನ್ನು ಬಲವಂತವಾಗಿ ಹಿಡಿದು ಬೆಡ್ರೂಂಗೆ ಕರೆದೊಯ್ದಿದ್ದಾರೆ. ಅನಂತರ ದೂರುಗಾರನ ವಿವಿಧ ರೀತಿಯ ಫೊಟೋಗಳು, ವೀಡಿಯೋಗಳನ್ನು ಮೊಬೈಲ್ ಫೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಯಿತು. ಬಳಿಕ ದೂರುಗಾರನ ಕೈಯ್ಯಲ್ಲಿದ್ದ ಮೊಬೈಲ್ ಫೋನ್ ಹಾಗೂ 1500 ರೂಪಾಯಿ ವಶಪಡಿಸಲಾಯಿತು.ಕೀಲಿ ಕೈ ಪಡೆದು ಕಾರಿನ ಬಾಗಿಲು ತೆರೆದು ಅದರಲ್ಲಿದ್ದ ಕೇರಳ ಬ್ಯಾಂಕ್ ಹಾಗೂ ಕೇರಳ ಗ್ರಾಮೀಣ ಬ್ಯಾಂಕ್ನ ಎಟಿಎಂ ಕಾರ್ಡ್ಗಳು, 25,000 ರೂಪಾಯಿ ಮೌಲ್ಯದ ಸಾಂಸಂಗ್ ಮೊಬೈಲ್ ಫೋನ್ ತೆಗೆದುಕೊಂಡ ಬಳಿಕ ಬೆದರಿಕೆಯೊಡ್ಡಿ ಎಟಿಎಂ ಕಾರ್ಡ್ನ ಪಿನ್ ನಂಬ್ರ ಕೇಳಿ ಪಡೆದುಕೊಂಡರು. ಅದನ್ನು ಬಳಸಿ ಎಟಿಎಂನಿಂದ 7200 ರೂಪಾಯಿ ಹಿಂಪಡೆದ ಬಳಿಕ ವ್ಯಾಪಾರಿಯನ್ನು ಕಳುಹಿಸಲಾಯಿತು.
ಆಗಸ್ಟ್ 17ರಂದು ದೂರುಗಾರನ ಅಂಗಡಿಗೆ ತಲುಪಿದ ಹಸ್ಸನ್ ಆಸಿಫ್ ಬೆದರಿಕೆಯೊಡ್ಡಿ 5000 ರೂಪಾಯಿ ಕಸಿದುಕೊಂಡಿದ್ದು, 2 ಲಕ್ಷ ರೂಪಾಯಿ ನೀಡದಿದ್ದಲ್ಲಿ ಫೊಟೋ ಹಾಗೂ ವೀಡಿಯೋಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದು, ಇದರಂತೆ ಕೇಸು ದಾಖಲಿಸಲಾಗಿದೆ. ಬಳಿಕ ಎಸ್ಐ ಎಸ್. ಅನೂಪ್ರ ನೇತೃತ್ವದಲ್ಲಿ ಎಎಸ್ಐಗಳಾದ ಅಜಯ್, ಅತುಲ್ ರಾಂ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಕೃಪೇಶ್, ಸಿವಿಲ್ ಪೊಲೀಸ್ ಆಫೀಸರ್ ಸುಧೀಶ್ ಎಂಬಿವರು ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.






