ಕುಂಬಳೆ: ಹೊಳೆಯಿಂದ ಹೊಯ್ಗೆ ಅನಧಿಕೃತವಾಗಿ ಸಂಗ್ರಹಿಸಿ ಸಾಗಾಟ ನಡೆಸಲು ದಂಧೆಕೋರರು ನಡೆಸುವ ತಂತ್ರಗಾರಿಕೆಯನ್ನು ಕುಂಬಳೆ ಪೊಲೀಸರು ಉಪಾಯ ದಿಂದ ಪತ್ತೆಹಚ್ಚಿದ್ದಾರೆ. ಈ ಮೂಲಕ ಮೊಗ್ರಾಲ್ ಅಳಿವೆ ಬಾಗಿಲಿನಲ್ಲಿ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ ೨ ದೋಣಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹಗಾರರು ಓಡಿ ಪರಾರಿಯಾಗಿದ್ದಾರೆ. ಈ ಹಿಂದೆ ದೋಣಿ ಮೂಲಕ ಸಂಗ್ರಹಿಸಿದ ಹೊಯ್ಗೆಯನ್ನು ದಡಕ್ಕೆ ತಲುಪಿಸಿ ಅಲ್ಲಿಂದ ಟಿಪ್ಪರ್ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಪೊಲೀಸರು ಅದರ ವಿರುದ್ಧ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಹೊಯ್ಗೆಯನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ದಡಕ್ಕೆ ತಲುಪಿಸಿ ಪಿಕಪ್ ವಾಹನದಲ್ಲಿ ಸಾಗಿಸುವ ಉಪಾಯವನ್ನು ಹೊಯ್ಗೆ ದಂಧೆಕೋರರು ಕಂಡುಕೊಂಡಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಕಾಸರಗೋಡು ಎಎಸ್ಪಿಯ ನಿರ್ದೇಶದಂತೆ ಕುಂಬಳೆ ಎಸ್ ಐ ಶ್ರೀಜೇಶ್ ನೇತೃತ್ವದ ಪೊಲೀಸರು ನಿನ್ನೆ ರಾತ್ರಿ ಮೊಗ್ರಾಲ್ ಅಳಿವೆ ಬಾಗಿಲಿಗೆ ಮಫ್ತಿ ವೇಷದಲ್ಲಿ ತಲುಪಿದ್ದಾರೆ. ಹೊಯ್ಗೆ ಸಂಗ್ರಹಗಾ ರರಿಗೆ ಸಂಶವುಂಟಾಗದಿರಲು ಹೊಳೆಗೆ ಗಾಳ ಹಾಕಿ ಮೀನು ಹಿಡಿಯುವವರ ರೀತಿಯಲ್ಲಿ ಪೊಲೀಸರು ತಮ್ಮ ಕಾರ್ಯಾಚರಣೆ ನಡೆಸಿ ದ್ದಾರೆ. ಈ ವೇಳೆ ಹೊಯ್ಗೆಯನ್ನು ತಂಡ ಗೋಣಿ ಚೀಲಗಳಲ್ಲಿ ತುಂಬಿಸಿ ದಡಕ್ಕೆ ತಲುಪಿಸಿತ್ತು. ಮೀನಿಗೆ ಗಾಳ ಹಾಕುತ್ತಿರುವುದು ಪೊಲೀಸರಾಗಿ ದ್ದಾರೆಂದು ಗಮನಕ್ಕೆ ಬಂದ ತಕ್ಷಣ ದೋಣಿಯಲ್ಲಿದ್ದವರು ಹೊಳೆಗೆ ಹಾರಿ ಪರಾರಿಯಾಗಿದ್ದಾರೆ.
ಪೊಲೀಸರು ನಿನ್ನೆ ರಾತ್ರಿ 10 ಗಂಟೆಗೆ ಆರಂಭಿಸಿದ ಈ ಕಾರ್ಯಾಚರಣೆ ಇಂದು ಮುಂಜಾನೆ 3 ಗಂಟೆಗೆ ವರೆಗೆ ಮುಂದುವರಿದಿದೆ. ಈ ಮೂಲಕ ಹೊಯ್ಗೆ ಸಂಗ್ರಹಕ್ಕೆ ಬಳಸುವ ಎರಡು ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವುಗಳನ್ನು ಇಂದು ಜೆಸಿಬಿ ಬಳಸಿ ನಾಶಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.







