ಕಾಸರಗೋಡು: ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ದ್ವಿತೀಯ ಹಂತದ ಚುನಾವಣೆ ನಾಳೆ ನಡೆಯಲಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತೃಶೂರು ಜಿಲ್ಲೆಗಳ ಒಟ್ಟು 604 ಸ್ಥಳೀಯಾಡಳಿತ ಸಂಸ್ಥೆಗಳ 12,391 ವಾರ್ಡ್ಗಳಿಗೆ ನಾಳೆ ಮತದಾನ ನಡೆಯಲಿದೆ. ನಾಳೆ ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳುವ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ ಮುಂದುವರಿ ಯಲಿದೆ. ಈ ಏಳು ಜಿಲ್ಲೆಗಳ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆಬಿದ್ದಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ನ 18, ಮೂರು ನಗರಸಭೆಗಳ 120, ಆರು ಬ್ಲೋಕ್ ಪಂಚಾಯತ್ಗಳ 92 ಮತ್ತು 38 ಗ್ರಾಮ ಪಂಚಾಯತ್ಗಳ 725 ವಾರ್ಡ್ಗಳಿಗೆ ನಾಳೆ ಮತದಾನ ನಡೆಯಲಿದೆ. ಎಲ್ಲಾ ವಾರ್ಡ್ಗಳಲ್ಲ್ಲೂ ಎಲ್ಡಿಎಫ್, ಯುಡಿಎಫ್, ಎನ್ಡಿಎ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಗ್ರಾಮ ಪಂಚಾಯತ್ಗ ಳಲ್ಲಾಗಿ ಒಟ್ಟು 1242 ಮತಗಟ್ಟೆಗಳು ಹಾಗೂ ನಗರಸಭೆಗಳಲ್ಲಿ 128 ಮತಗಟ್ಟೆಗಳನ್ನು ಸಜ್ಜೀಕರಿಸಲಾಗಿದೆ. ಈ ಮತಗಟ್ಟೆಗಳಲ್ಲಾಗಿ 3995 ಮಹಿಳೆಯರು ಮತ್ತು 2589 ಪುರುಷ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಲಾಗಿದೆ. ಮಹಿಳೆಯರು ಮಾತ್ರ ಚುನಾವಣಾ ಸಿಬ್ಬಂದಿಗಳಾಗಿರುವ 179 ಮತಗಟ್ಟೆಗಳು ಜಿಲ್ಲೆಯಲ್ಲಿವೆ. ಈ ಬಾರಿ ಚುನಾವಣಾ ಕರ್ತವ್ಯಕ್ಕಾಗಿ ಶೇ. 20ರಷ್ಟು ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 207 ಬಸ್ಗಳು, 111 ಮಿನಿ ಬಸ್ಗಳು, 69 ಟ್ರಾವಲರ್ಗಳು ಮತ್ತು 32 ಕಿರು ವಾಹನಗಳನ್ನು ಬಳಸಲಾಗುತ್ತಿದೆ. ಯಾವುದಾದರೂ ಮತಗಟ್ಟೆಗಳಲ್ಲಿ ಮತದಾನ ವೇಳೆ ಮತಯಂತ್ರ ಕೈಕೊಟ್ಟಲ್ಲಿ ಅದಕ್ಕೆ ಪರ್ಯಾಯವಾಗಿ ಬದಲಿ ಮತ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ.
ಮತದಾನಕ್ಕಿರುವ ಚುನಾವಣಾ ಸಾಮಗ್ರಿಗಳ ವಿತರಣೆ ಜಿಲ್ಲೆಯ 9 ಕೇಂದ್ರಗಳಲ್ಲಿ ಇಂದು ಬೆಳಿಗ್ಗೆ ಆರಂಭಗೊAಡಿದೆ. ಮಧ್ಯಾಹ್ನದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದು ಇವರು ನಾಳೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪ್ರಥಮ ಹಂತದಲ್ಲಿ ನಿನ್ನೆ ಏಳು ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಶೇ. 70.9ರಷ್ಟು ಮತಗಳು ಚಲಾಯಿಸಲ್ಪಟ್ಟಿದೆ.







