ಮಂಜೇಶ್ವರ: ಕಣ್ವತೀರ್ಥ ಪರಿಸರ ದಲ್ಲಿ ಹಲವು ವರ್ಷಗಳಿಂದ ಕಾರ್ಯಾ ಚರಿಸುತ್ತಿರುವ ಯುನೈಟೆಡ್ ಸಿ-ಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಕೇಂದ್ರದಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಕಣ್ವತೀರ್ಥ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಲಾಯಿತು. ಕಣ್ವತೀರ್ಥ ಗೇಟ್‌ನಿಂದ ಆರಂಭಗೊಂಡ ಪ್ರತಿ ಭಟನಾ ಮೆರವಣಿಗೆಯನ್ನು ಮಂಜೇಶ್ವರ ಪಂ. ಮುಂಭಾಗದಲ್ಲಿ ಪೊಲೀಸರು ತಡೆದರು. ಬಳಿಕ ಪಂಚಾಯತ್ ಮುಂಭಾಗದಲ್ಲಿ ನಿವೃತ್ತ ಸೇನಾಧಿಕಾರಿ ವಿಜಯ ಕುಮಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮಧುಸೂದನ ಆಚಾರ್ಯ ಉದ್ಘಾಟಿಸಿ ದರು. ಈ ಫ್ಯಾಕ್ಟರಿಯಿಂದ ಪರಿಸರದ ನೀರು, ಗಾಳಿ ಕಲುಷಿತವಾಗುತ್ತಿದ್ದು, ಈ ಪರಿಸರದ ಜನರ ನೆಮ್ಮದಿಯ ಬದುಕಿಗೆ ಹಾನಿಯಾಗುತ್ತಿದೆ ಎಂದು ಪ್ರತಿಭಟನಾಗಾರರು ದೂರಿದರು. ಕಳೆದ ಏಳು ವರ್ಷದಿಂದ ಹಲವು ಬಾರಿ ಈ ಬಗ್ಗೆ ದೂರು ನೀಡಿದರೂ ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಜಯಂತ ಕುಮಾರ್, ಪವನ್ ಕುಮಾರ್, ಪ್ರವೀಣ್ ಕುಮಾರ್, ಸುಕುಮಾರ್ ಮಜಲ್, ಡಾ. ಚಂದ್ರಹಾಸ ಕಣ್ವತೀರ್ಥ ನೇತೃತ್ವ ನೀಡಿದರು.
