ತಿರುವನಂತಪುರ: ಪ್ರಧಾನ ಮಂತ್ರಿ ನರೇಂದ್ರಮೋದಿ ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ತಿರುವನಂತಪುರಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರಿಗೆ ಕೇರಳ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿ ನೇತಾರರೂ ಸೇರಿದಂತೆ ಹಲವು ಗಣ್ಯರು ಭಾವ್ಯ ಸ್ವಾಗತ ನೀಡಿದರು. ನಂತರ ಪ್ರಧಾನಮಂತ್ರಿ ಅಲ್ಲಿಂದ ಪ್ರಧಾನ ಕಾರ್ಯಕ್ರಮ ನಡೆಯುವ ತಿರುವನಂತಪುರ ಪುತ್ತರಿಕಂಡ ಮೈದಾನ ತನಕ ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆಯುದ್ದಕ್ಕೂ ಸಹಸ್ರಾರು ಮಂದಿ ಜಮಾಯಿಸಿ ಪ್ರಧಾನಿಯವರಿಗೆ ಹೂಮಳೆಗರೆದು ಮುಗಿಲುಮುಟ್ಟುವ ಜೈಕಾರಗಳನ್ನು ಮೊಳಗಿಸಿದರು. ನಂತರ ಪುತ್ತರಿಕಂಡ ಮೈದಾನದಲ್ಲಿ ನಡೆದ ಬೃಹತ್ ಜನಸ್ತೋಮ ನೆರೆದ ಅದ್ದೂರಿಯ ಕಾರ್ಯಕ್ರಮದಲ್ಲಿ ಪ್ರಧಾನಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು ಮಾತ್ರವಲ್ಲದೆ ಹಲವು ಯೋಜನೆಗಳ ಶಿಲಾನ್ಯಾಸ ಕ್ರಮವನ್ನು ನೆರವೇರಿಸಿದರು. ಪಿ.ಎಂ ಸ್ವನಿಧಿ ಕ್ರೆಡಿಟ್ ಕಾರ್ಡ್‌ನ ಬಿಡುಗಡೆಯನ್ನೂ ಅವರು ಇದೇ ಸಂದರ್ಭದಲ್ಲಿ ನಿರ್ವಹಿಸಿದರು. ಇದರ ಜೊತೆಗೆ ಸಾಲ ವಿತರಣೆ ಕ್ರಮವನ್ನೂ ಉದ್ಘಾಟಿಸಿದರು. ತಿರುವನಂತಪುರದ ಸಿಎಸ್‌ಐಆರ್ ಎಸ್‌ಐಐಎಸ್‌ಟಿ ಹಬ್ ಹಾಗೂ ಶ್ರೀ ಚಿತ್ತಿರಾತಿ ರುನಾಳ್‌ನ ಆಧುನಿಕ ರೇಡಿಯೋ ಸರ್ಜರಿ ಕೇಂದ್ರದ ಉದ್ಘಾಟನೆ ನೆರವೇರಿಸಿದರು. ಇದರ ಹೊರತಾಗಿ ಕೇರಳಕ್ಕೆ ಮಂಜೂರು ಮಾಡಲಾಗಿ ರುವ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳಿಗೂ ಹಸಿರು ನಿಶಾನೆ ನೀಡಿದರು. ಪೂಜಾಪುರ ಪ್ರಧಾನ ಅಂಚೆ ಕಚೇರಿ ಉದ್ಘಾಟನೆಯನ್ನು ಅವರು ನಿರ್ವಹಿಸಿದರು. ಇದಾದನಂತರ ಬಿಜೆಪಿ ಕಾರ್ಯಕರ್ತರು ಹಾಗೂ ನೇತಾರರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಭಾಗವಹಿಸಲಿದ್ದು ಅದರಲ್ಲಿ ಬಿಜೆಪಿಯ ಮಿಶನ್ 2026 ಎಂಬ ಯೋಜನೆಯನ್ನು ಘೋಷಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯ ಪ್ರಚಾರಕ್ಕೂ ಚಾಲನೆ ನೀಡುವರು. ಇದೇ ಕಾರ್ಯಕ್ರಮದಲ್ಲಿ ಎನ್‌ಡಿಎ ಪಾಳಯಕ್ಕೆ ಸೇರ್ಪಡೆಗೊಳ್ಳುವ ಘೋಷಣೆಯನ್ನು ಟಿ-20 ಪಕ್ಷದ ನೇತಾರ ಸಾಬು ಎಂ.ಜೇಕಬ್ ವಿದ್ಯುಕ್ತವಾಗಿ ಘೋಷಿಸುವರು. ಪ್ರಧಾನಮಂತ್ರಿ ಆಗಮನದ ಹಿನ್ನೆಲೆಯಲ್ಲಿ ತಿರುವನಂತಪುರ ನಗರದಾದ್ಯಂತ ಬಿಗು ಭದ್ರತೆ ಏರ್ಪಡಿಸಲಾಗಿದೆಯಲ್ಲದೆ ಎಲ್ಲೆಡೆ ಕಟ್ಟೆಚ್ಚರ ಪಾಲಿಸಲಾಗುತ್ತಿದೆ.







