ಕಾಸರಗೋಡು: ಕೇರಳ ವಿಧಾನಸಭೆಗೆ ನಡೆಯುವ ಚುನಾವಣೆಯನ್ನು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಸಲು ಕಾಸರಗೋಡು ಜಿಲ್ಲಾ ಮೆಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿಷೇಧಾಜ್ಞೆ ಜ್ಯಾರಿಗೊಳಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 163ನೇ ಪರಿಚ್ಚೇದ ಪ್ರಕಾರ ಈ ನಿಷೇಧಾಜ್ಞೆ ಆದೇಶ ಜ್ಯಾರಿಗೊಳಿಸಲಾಗಿದೆ. ಇದು ನಿನ್ನೆ ಸಂಜೆಯಿಂದ ಜ್ಯಾರಿಗೊಂಡಿದ್ದು ಎ. 10ರಂದು ಬೆಳಿಗ್ಗೆ ೬ಗಂಟೆತನಕ ಮುಂದುವರಿಯಲಿದೆ. ಸ್ವತಂತ್ರ ಹಾಗೂ ನ್ಯಾಯಯುತವಾದ ರೀತಿಯಲ್ಲಿ ಚುನಾವಣೆಯನ್ನು ಖಾತರಿಪಡಿಸುವ ಹಾಗೂ ಮತದಾನ ವೇಳೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಇಂತಹ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಗುಂಪು ಸೇರುವಿಕೆ, ಮೆರವಣಿಗೆ ಇತ್ಯಾದಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಮಾತ್ರವಲ್ಲ ರಾಜಕೀಯ ಕಾರ್ಯ ಕರ್ತರು ಬಹಿರಂಗವಾಗಿ ಮತಯಾಚನೆ ನಡೆಸುವಂತಿಲ್ಲ. ವಾಹನಗಳಲ್ಲಿ ಧ್ವನಿವರ್ಧಕ ಬಳಸುವುದಕ್ಕೂ ನಿಷೇಧ ಹೇರಲಾಗಿದೆ. ಮತಗಟ್ಟೆಗಳಲ್ಲಿ ತೀವ್ರ ನಿಗಾ ಇರಿಸಲಾಗುವುದು. ಚುನಾವಣಾ ಸಿಬ್ಬಂದಿಗಳ ಹೊರತಾಗಿ ಇತರ ಯಾರೂ ಮೊಬೈಲ್ ಫೋನ್ ಅಥವಾ ವಯರ್‌ಲೆಸ್ ಸೆಟ್‌ಗಳನ್ನು ಮತ ಗಟ್ಟೆಗಳಲ್ಲಿ ಉಪಯೋಗಿಸುವಂತಿಲ್ಲ. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಬೂತ್‌ಗಳನ್ನು ಸ್ಥಾಪಿಸುವಂತಿಲ್ಲ. ಆದರೆ ವಿವಾಹಗಳು, ಮರಣಾನಂತರ ಕಾರ್ಯಕ್ರಮಗಳು ಮತ್ತಿತರ ಖಾಸಗಿ ಆಚರಣೆಗಳಿಗೆ ಹಾಗೂ ಮತ ಚಲಾಯಿಸಲು ಹೋಗುವವರಿಗೆ ಈ ನಿಯಂತ್ರಣ ಅನ್ವಯಗೊಳ್ಳುವುದಿಲ್ಲ ಎಂದು ನಿಷೇಧಾಜ್ಞೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.






