ಬದಿಯಡ್ಕ: ಜನ್ಮತಃ ಹೃದಯ ಸಮಸ್ಯೆಯಿದ್ದ ರಿಷಾದ್ (21) ನಿಧನ ಹೊಂದಿದರು. ಬದಿಯಡ್ಕ ಪಳ್ಳತ್ತಡ್ಕದ ಮುಹಮ್ಮದ್- ದೈನಾಬಿ ದಂಪತಿಯ ಪುತ್ರನಾಗಿದ್ದಾರೆ. ರಂಧ್ರವಿರುವ ಹೃದಯದೊಂದಿಗೆ ರಿಷಾದ್ ಜನಿಸಿದ್ದರು. 10 ವರ್ಷದವರೆಗೆ ಮಗುವಿನ ಶರೀರ ಪ್ರಕೃತಿ ರಿಷಾದ್‌ರಿಗಿತ್ತು. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯ ಬಳಿಕ ಆರೋಗ್ಯ ಸ್ಥಿತಿಯಲ್ಲಿ ಮತ್ತಷ್ಟು ಸಮಸ್ಯೆ ಕಂಡು ಬಂತು. ಎರಡೂವರೆ ಲಕ್ಷ ರೂ. ವೆಚ್ಚ ಮಾಡಿ ಶಸ್ತ್ರಚಿಕಿತ್ಸೆ ಮಾಡಿದರೆ ರಿಷಾದ್‌ರ ಜೀವ ಉಳಿಸಬಹುದೆಂದು ಕೊಚ್ಚಿ ಅಮೃತ ಆಸ್ಪತ್ರೆಯ ಡಾಕ್ಟರ್‌ಗಳು ತಿಳಿಸಿದ್ದರು. ಆದರೆ ಬದುಕಿನ ಸಂಪಾದನೆಯನ್ನೆಲ್ಲ ಏಕಪುತ್ರನ ಚಿಕಿತ್ಸೆಗಾಗಿ ವೆಚ್ಚ ಮಾಡಿದ ತಂದೆ ಮುಹಮ್ಮದ್‌ರಿಗೆ ಇಷ್ಟೊಂದು ದೊಡ್ಡ ಮೊತ್ತ ಕನಸು ಕಾಣಲು ಕೂಡಾ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪಳ್ಳತ್ತಡ್ಕದ ಸಮಾಜಸೇವಕ ಮೊದುರ ನೇತೃತ್ವದಲ್ಲಿ ಸ್ಥಳೀಯರು ರಂಗಕ್ಕಿಳಿದರು.
ವಾಲಿಬಾಲ್ ಟೂರ್ನಮೆಂಟ್ ಆಯೋಜಿಸಿ ಹಲವರಿಂದ ಹಣ ಸಂಗ್ರಹಿಸಿ ಶಸ್ತ್ರಚಿಕಿತ್ಸೆಗಿರುವ ಮೊತ್ತ ಕಂಡುಕೊಂಡರು. ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ ರಿಷಾದ್‌ರ ದೇಹಪ್ರಕೃತಿಯಲ್ಲಿ ಕೂಡಾ ಬದಲಾವಣೆ ಕಂಡು ಬಂತು. ಆದರೆ ಕೆಲವು ದಿನಗಳ ಹಿಂದೆ ರಿಷಾದ್ ಪೇಟೆಗೆ ಬಂದಾಗ ತಲೆ ಸುತ್ತಿ ಬಿದ್ದಿದ್ದು, ಇದು ದೊಡ್ಡ ಸಮಸ್ಯೆಯಾಗಿ ಬದಲಾಯಿತು. ಅಲ್ಲಿದ್ದ ಆಟೋ ಚಾಲಕರು ರಿಷಾದ್‌ನನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರು. ಚೆಂಗಳದ ನಾಯನಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಬಿದ್ದಾಗ ಪ್ರಜ್ಞಾಹೀನಗೊಂಡ ರಿಷಾದ್ ಬಳಿಕ ಚೇತರಿಸಲಿಲ್ಲ. ಕೊನೆಗೆ ಕುಟುಂಬದ ಹಾಗೂ ಸ್ಥಳೀಯರ ಪ್ರಾರ್ಥನೆಗಳನ್ನೆಲ್ಲಾ ವಿಫಲಗೊಳಿಸಿ ರಿಷಾದ್ ಇಹಲೋಕ ತ್ಯಜಿಸಿದರು. ಮೃತರು ತಂದೆ, ತಾಯಿ, ಸಹೋದರಿಯರಾದ ಶಾಹಿನ, ರಿಸ್ವಾನ, ರಿಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






