ಉಪ್ಪಳ: ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲು ಎಂಬಲ್ಲಿ ಎರಡು ರಸ್ತೆ ಸಂಗಮಿಸುತ್ತಿದ್ದು ಇದು ಹಾನಿಗೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ಮಣ್ಣಂಗುಳಿಯಿಂದ ಕೋಡಿಬೈಲು ಹಾಗೂ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಸಂಗಮಿಸುವ ರಸ್ತೆಗಳು ಶೋಚನೀಯಗೊಂಡಿವೆ. ಈ ಪ್ರದೇಶದಲ್ಲಿ ಶಾಲೆ ಸಹಿತ ನೂರಾರು ಮನೆಗಳಿದ್ದು ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯ ಡಾಮರು, ಕಾಂಕ್ರೀಟ್, ಇಂಟರ್ ಲಾಕ್‌ಗಳೆಲ್ಲಾ ಹಾನಿಗೊಂಡು ಹೊಂಡಗಳು ಸೃಷ್ಟಿಯಾಗಿ ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





