ಕುಂಬಳೆಯಲ್ಲಿ ಎನ್‌ಡಿಎ ಶಕ್ತಿ ಪ್ರದರ್ಶಿಸಿದ ರೋಡ್ ಶೋ

ಕುಂಬಳೆ: ಎನ್‌ಡಿಎ ಮಂಜೇಶ್ವರ ವಿಧಾನಸಭಾ ಮಂಡಲ ಅಭ್ಯರ್ಥಿ ಕೆ. ಸುರೇಂದ್ರನ್ ಹಾಗೂ ತಿರುವನಂತಪುರ ಮೇಯರ್ ವಿ.ವಿ. ರಾಜೇಶ್ ನೇತೃತ್ವ ನೀಡಿದ ರೋಡ್ ಶೋದಲ್ಲಿ  ಹಲವಾರು ಕಾರ್ಯಕರ್ತರು ಭಾಗವಹಿಸಿ ಎನ್‌ಡಿಎ ಬಲಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಪರಿಸರದಿಂದ ಆರಂಭಗೊಂಡ ರೋಡ್ ಶೋ ಪೇಟೆ ಸುತ್ತಿ ಟ್ಯಾಕ್ಸಿ ಸ್ಟ್ಯಾಂಡ್ ಪರಿಸರದಲ್ಲಿ ಸಮಾಪ್ತಿಗೊಂ ಡಿತು. ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಜಯಗಳಿಸಿದರೆ ಬಹಳ ಅಭಿವೃದ್ಧಿ ಉಂಟಾಗಲಿದೆಯೆಂದು, ಕೇಂದ್ರ ಸರಕಾರದ ಯೋಜನೆಗಳನ್ನು ಗರಿಷ್ಠವಾಗಿ  ಮಂಡಲಕ್ಕೆ ತಲುಪುವುದಾಗಿ ತಿರುವನಂತಪುರದ ಮೇಯರ್ ವಿ.ವಿ. ರಾಜೇಶ್ ನುಡಿದರು. ರಾಜ್ಯ ಸರಕಾರದ ಸಹಾಯವಿಲ್ಲದೆ ತಿರುವನಂತಪುರ ಕಾರ್ಪೋರೇಶನ್ ಹಲವಾರು ಯೋಜನೆಗಳನ್ನು ಜ್ಯಾರಿಗೊಳಿಸುತ್ತಿದೆ. ಕೆ. ಸುರೇಂದ್ರನ್ ಜಯಗಳಿಸಿದರೆ ರಾಜ್ಯ ಸರಕಾರದ ಸಹಕಾರ ಇಲ್ಲದಿದ್ದರೂ ಮಂಜೇಶ್ವರದಲ್ಲಿ ಅಭಿವೃದ್ಧಿ ಉಂಟುಮಾಡಲು ಸಾಧ್ಯವಿದೆ. ಅದಕ್ಕಾಗಿ ತಿರುವನಂತಪುರ ಕಾರ್ಪೋರೇಶನ್‌ನ ಸಹಾಯವೂ ಇರಲಿದೆಯೆಂದು ವಿ.ವಿ. ರಾಜೇಶ್ ನುಡಿದರು.

ಜಾತಿ, ಮತ ಚಿಂತೆಗಳಿಗೆ ಅತೀತವಾಗಿ ಈ ಬಾರಿ ಅಭಿವೃದ್ಧಿಗಾಗಿ ಮಂಜೇಶ್ವರದ ಜನರು ಮತ ನೀಡುವರೆಂದು ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ನುಡಿದರು. ಜನರನ್ನು ವಿಭಜಿಸುವುದಕ್ಕಿರುವ ಐಕ್ಯರಂಗದ ಯತ್ನ ಮಂಜೇಶ್ವರದಲ್ಲಿ ಫಲ ಬೀರದು ಎಂದು ಅವರು ನುಡಿದರು. ಮಂಗಳೂರು ನೋರ್ತ್ ಶಾಸಕ ಭ ರತ್ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ,  ಸತೀಶ್ಚಂದ್ರ ಭಂಡಾರಿ, ವಿಜಯ ಕುಮಾರ್ ರೈ, ಸುಜಿತ್ ರೈ, ಶಿವಪ್ರಸಾದ್ ರೈ,  ಆದರ್ಶ್ ಬಿ.ಎಂ, ಮಧು, ಮಣಿಕಂಠ ರೈ, ಅನಿಲ್ ಮಣಿಯಂಪಾರೆ, ವಿ. ರವೀಂದ್ರನ್,   ಪ್ರೇಮಲತಾ ಗಟ್ಟಿ, ಸುನಿಲ್ ಅನಂತಪುರ ಭಾಗವಹಿಸಿದರು.

You cannot copy contents of this page