ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯಗಳ ಮಧ್ಯೆ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಿಗೆ ಎರಡು ಪವನ್ ಚಿನ್ನಾಭರಣ ಹಾಗೂ ೩೦ ಸಾವಿರ ರೂಪಾಯಿಗಳು ಪತ್ತೆಯಾಗಿದ್ದು ಅದನ್ನು ಕೂಡಲೇ ವಾರಸುದಾರರಿಗೆ ಹಸ್ತಾಂತರಿಸಿ ಮಾದರಿಯಾದರು. ಪಳ್ಳಿಕ್ಕರೆ ಪಂಚಾಯತ್‌ನ 10 ಹಾಗೂ 11ನೇ ವಾರ್ಡ್‌ಗಳ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಾದ ಕಮಲ ಎನ್ ಹಾಗೂ ಮಮತ ಎಂಬಿವರು ಪ್ರಾಮಾಣಿಕತೆ ಮೆರೆದಿದ್ದಾರೆ. ಪೊಯಿನಾಚಿ ಪರಂಬ್‌ನ ಕೃಷ್ಣ ಎಂಬವರ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಿದ್ದಾಗ ಚಿನ್ನ ಹಾಗೂ ಹಣ ಪತ್ತೆಯಾಗಿದೆ. ತ್ಯಾಜ್ಯವನ್ನು ಬೇರ್ಪಡಿಸುತ್ತಿದ್ದಾಗ ಪ್ಲಾಸ್ಟಿಕ್ ಚೀಲವೊಂದರಲ್ಲಿ ಇವು ಕಂಡುಬಂದಿದೆ. ಕೃಷ್ಣನ್‌ರ ಪತ್ನಿ ಜಾನಕಿ ಇತ್ತೀಚೆಗೆ ಮೃತಪಟ್ಟಿದ್ದರು. ಅವರು ಉಪಯೋಗಿಸುತ್ತಿದ್ದ ಚೀಲದಲ್ಲಿ ಬಾಚಣಿಗೆ ಇತ್ಯಾದಿಗಳಿದ್ದವು. ಅವುಗಳನ್ನು ಒಟ್ಟಾಗಿ ತ್ಯಾಜ್ಯಗಳೊಂದಿಗೆ ತುಂಬಿಸಿಡಲಾಗಿತ್ತು. ನಿನ್ನೆ ಅಪರಾಹ್ನ ತ್ಯಾಜ್ಯ ಸಂಗ್ರಹಿಸಲು ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಕೃಷ್ಣನ್‌ರ ಮನೆಗೆ ಬಂದಿದ್ದರು. ಈ ವೇಳೆ ಚೀಲದಲ್ಲಿ ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾರ್ಯಕರ್ತೆಯರಿಗೆ ನೀಡಲಾಗಿತ್ತು. ಕಾರ್ಯಕರ್ತೆಯರು ಅದನ್ನು ತೆರೆದು ನೋಡಿದಾಗಲೇ ಕಾಗದದಲ್ಲಿ ಸುತ್ತಿಟ್ಟ ಹಣ ಹಾಗೂ ಚಿನ್ನಾಭರಣ ಕಂಡುಬಂದಿದೆ. ಕೂಡಲೇ ಅದನ್ನು ಕೃಷ್ಣನ್‌ರಿಗೆ ಅವರು ಹಸ್ತಾಂತರಿಸಿದರು. ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರ ಈ ಪ್ರಾಮಾಣಿಕ ಕಾರ್ಯವನ್ನು ಕೃಷ್ಣನ್ ಹಾಗೂ ಕುಟುಂಬ ಅಭಿನಂದಿಸಿದೆ.






