ಶಬರಿಮಲೆ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಒಂದನೇ ಆರೋಪಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯ 1.30 ಕೋಟಿ ರೂ.ಗಳ ಆಸ್ತಿಗಳನ್ನು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ) ಮುಟ್ಟುಗೋಲು ಹಾಕಿದ ಬೆನ್ನಲ್ಲೇ ಈ ಪ್ರಕರಣದ ಇತರ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಅಗತ್ಯದ ಕ್ರಮದಲ್ಲೂ ಇ.ಡಿ ತೊಡಗಿದೆ. ಇದರಂತೆ ಈ ಪ್ರಕರಣದ ಇತರ ಆರೋಪಿಗಳ ಪೈಕಿ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ವಾಸು, ಮಂಡಳಿಯ ಮಾಜಿ ಅಧಿಕಾರಿ ಮುರಾರಿಬಾಬುರ ಆಸ್ತಿಗಳ ಮುಟ್ಟುಗೋಲು ಕ್ರಮದಲ್ಲೂ ಇ.ಡಿ ತೊಡಗಿದೆ.
ಇದಾದ ಬಳಿಕ ಇತರ ಆರೋಪಿಗಳಾದ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ನೇತಾರನಾಗಿರುವ ಎ. ಪದ್ಮಕುಮಾರ್‌ರ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಇ.ಡಿ ತೀರ್ಮಾನಿಸಿದೆ. ಶಬರಿಮಲೆ ದೇಗುಲದಿಂದ ಕಳವುಗೈಯ್ಯಲಾದ ಚಿನ್ನಕ್ಕೆ ಸರಿಸಮಾನವಾದ ಮೌಲ್ಯದಷ್ಟು ಆಸ್ತಿಗಳನ್ನು ಈ ರೀತಿ ಮುಟ್ಟುಗೋಲು ಹಾಕಲಾಗುವುದೆಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ಚೆನ್ನೈ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯ ಮಾಲಕ ಪಂಕಜ್ ಭಂಡಾರಿಯ ಸಂಸ್ಥೆಯಿಂದ 100 ಗ್ರಾಂ ಚಿನ್ನದ ಗಟ್ಟಿಯನ್ನು ಇ.ಡಿ ವಶಕ್ಕೆ ತೆಗೆದುಕೊಂಡಿದೆ. ಇದು ಶಬರಿಮಲೆ ದೇಗುಲದ ಗರ್ಭಗುಡಿ ಬಾಗಿಲ ದ್ವಾರಪಾಲಕ ಮೂರ್ತಿಯಿಂದ ಕಳವುಗೈದ ಚಿನ್ನವಾಗಿದೆಯೆಂದು ಸಂಶಯಿಸಲಾಗುತ್ತಿದೆ.
ಶ್ರೀ ಕ್ಷೇತ್ರದ ಗರ್ಭಗುಡಿ ದ್ವಾರದ ಬಾಗಿಲಿನ ಚಿನ್ನಲೇಪಿತ ಬಾಗಿಲು ಕೇವಲ ತಾಮ್ರದ್ದಾಗಿತ್ತು ಎಂಬ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ದೇಗುಲದ ದಾಖಲುಪತ್ರಗಳಲ್ಲಿ ನಮೂದಿಸಿ ಅದನ್ನು ಸಾಗಿಸಲು ಉಪಯೋಗಿಸಿದ ಮಹಜರು, ವಿವಿಧ ಡಿಜಿಟಲ್ ಪುರಾವೆಗಳು, 2019ರಿಂದ 2025ರ ತನಕದ ಅವಧಿಯಲ್ಲಿ ತಿರುವಿದಾಂಕೂರು ಮುಜರಾಯಿಮಂಡಳಿ ನಡೆಸಿದ ಔಪಚಾರಿಕೆ ಶಿಫಾರಸ್ಸುಗಳ ದಾಖಲುಗಳು, ಹೊರಡಿಸಲಾಗಿರುವ ಅಧಿಸೂಚನೆಗಳು, ಪತ್ರ ವ್ಯವಹಾರ ಗಳು, ಚಿನ್ನದಂಗಡಿಗಳೊಂದಿಗೆ ನೀಡಲಾದ ಹಣ ವ್ಯವಹಾರದ ರಶೀದಿಗಳು, ಚಿನ್ನ ಲೇಪನದ ವಾರಂಟಿ ಸರ್ಟಿಫಿಕೇಟ್ ಇತ್ಯಾದಿಗಳನ್ನು ಇ.ಡಿ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಭಾರೀ ಪ್ರಮಾಣದಲ್ಲಿ ನಕಲಿ ದಾಖಲುಪತ್ರ ಗಳು ಹಾಗೂ ಡಿಜಿಟಲ್ ಪುರಾವೆಗಳೆಲ್ಲವೂ ಇ.ಡಿಗೆ ಲಭಿಸಿದೆ. ಈ ಪಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಾಗಿ ಒಟ್ಟಾರೆಯಾಗಿ 30 ಕೋಟಿ ರೂ.ಗಳ ಆಸ್ತಿ ಹೊಂದಿರುವ ಮಾಹಿತಿಗಳು 2013ರಲ್ಲಿ ಇ.ಡಿಗೆ ಲಭಿಸಿದೆ. ಅದರಲ್ಲಿ 1.30 ಕೋಟಿ ರೂ.ಗಳ ಆಸ್ತಿಗಳನ್ನು ಇ.ಡಿ ಈಗಾಗಲೇ ಮುಟ್ಟುಗೋಲು ಹಾಕಿದೆ.







