ಶಬರಿಮಲೆ: ಶಬರಿಮಲೆ ದೇಗುಲ ದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ಹಿಂದೆ ಭಾರೀ ದೊಡ್ಡ ದರೋಡೆ ತಂಡದ ಕೈವಾಡವಿದೆ ಎಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಈಗ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿರುವ ಚೆನ್ನೈಯ ಸ್ಮಾರ್ಟ್ ಕ್ರಿಯೇಷನ್ಸ್‌ನ ಸಿಇಒ ಪಂಕಜ್ ಭಂಡಾರಿ ಮತ್ತು ಕರ್ನಾಟಕ ಬಳ್ಳಾರಿಯ ಚಿನ್ನದಂಗಡಿ ಮಾಲಕ ಗೋವರ್ಧನ್ ಹಾಗೂ ದೇವಸ್ವಂ ಮಂಡಳಿಯ ಸಿಬ್ಬಂದಿಗಳು ಸೇರಿ ಭಾರೀ ಒಳಸಂಚು ಹೂಡಿದ್ದರೆಂಬುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದೂ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ತನಿಖಾ ತಂಡ ತಿಳಿಸಿದೆ.
ದೊಡ್ಡ ಕೊಡುಗೆಗಳನ್ನು ನೀಡುತ್ತಿರುವವರೆಂಬ ಹೆಸರಲ್ಲಿ ಈ ಇಬ್ಬರು ಆರೋಪಿಗಳು ದೇವಸ್ವಂ ಮಂಡಳಿಯ ಮೇಲೆ ಅತೀ ನಿರ್ಣಾಯಕ ಹಿಡಿತವನ್ನು ಹೊಂದಿದ್ದಾರೆ. ಆದ್ದರಿಂದ ಬಂಧಿತರಾದ ಪಂಕಜ್ ಭಂಡಾರಿ ಮತ್ತು ಗೋವರ್ಧನ್‌ರನ್ನು ನ್ಯಾಯಾಂಗ ಬಂಧನದಿಂದ ಮತ್ತೆ ತಮ್ಮ ಕಸ್ಟಡಿಗೆ ತೆಗೆದು ವಿಚಾರಣೆಗೊಳಪಡಿಸಿದ್ದಲ್ಲಿ ಅವರು ದೇವಸ್ವಂ ಮಂಡಳಿಯ ಸಿಬ್ಬಂದಿಗಳೊಂದಿಗೆ ಹೊಂದಿರುವ ನಂಟುಗಳು ಸ್ಪಷ್ಟಗೊಳ್ಳಲಿದೆ ಎಂದು ವರದಿಯಲ್ಲಿ ತನಿಖಾ ತಂಡ ತಿಳಿಸಿದೆ. ಇದರಿಂದಾಗಿ ದೇವಸ್ವಂ ಮಂಡಳಿಯ ಮಾಜಿ ಸದಸ್ಯರಾದ ಕೆ.ವಿ. ಶಂಕರ್‌ದಾಸ್ ಮತ್ತು ವಿಜಯ್ ಕುಮಾರ್‌ರವರು ಕೂಡಾ ಕಾನೂನಿನ ಕುಣಿಕೆಯಲ್ಲಿ ಸಿಲುಕುವ ಸಾಧ್ಯತೆ ಉಂಟಾಗಿದೆ.







