ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದ ತೀರ್ಥಾಟನೆ ನಾಳೆ ಆರಂಭಗೊಳ್ಳಲಿದೆ. ಅದಕ್ಕಿರುವ ಅಗತ್ಯದ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿದೆ.
ನಾಳೆ ಸಂಜೆ 5 ಗಂಟೆಗೆ ತಂತ್ರಿ ವರ್ಯ ಕಂಠರರ್ ಮಹೇಶ್ ಮೋಹನ ರ್‌ರ ಸಾನಿಧ್ಯದಲ್ಲಿ ಮುಖ್ಯ ಅರ್ಚಕ ಅರುಣ್ ಕುಮಾರ್ ನಂಬೂದಿರಿ ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸುವುದರೊಂದಿಗೆ ಈ ಬಾರಿಯ ಮಂಡಲ ಕಾಲದ ತೀರ್ಥಾಟನೆಗೆ ಚಾಲನೆ ದೊರಕಲಿದೆ.
ನಂತರ ಕ್ಷೇತ್ರದ ಹೊಸ ಮುಖ್ಯ ಅರ್ಚಕರನ್ನು ಹದಿನೆಂಟು ಮೆಟ್ಟಿಲೇರಿಸಿ ಸನ್ನಿಧಾನಕ್ಕೆ ಕರೆದೊಯ್ಯಲಾಗುವುದು. ಮಾಳಿಗಪುರಂ ದೇಗುಲದ ಅರ್ಚಕ ಸ್ಥಾನವನ್ನು ಮನು ನಂಬೂದಿರಿ ವಹಿಸಿಕೊಳ್ಳಲಿದ್ದಾರೆ.
ಸೋಮವಾರ ಮುಂಜಾನೆ 3 ಗಂಟೆಗೆ ನೂತನ ಮುಖ್ಯ ಅರ್ಚಕರು ಶಬರಿಮಲೆ ಮತ್ತು ಮಾಳಿಗಪುರ ದೇವಸ್ಥಾನಗಳ ಗರ್ಭಗುಡಿಗಳನ್ನು ತೆರೆದು ದೀಪ ಬೆಳಗಿಸುವ ಮೂಲಕ ತೀರ್ಥಾಟನೆ ಆರಂಭಗೊಳ್ಳಲಿದೆ. ತೀರ್ಥಾಟನಾ ಕಾಲದಲ್ಲಿ ಮುಂಜಾನೆ 3 ಗಂಟೆಗೆ ಗರ್ಭಗುಡಿ ಬಾಗಿಲು ತೆರೆದು ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುವುದು. ನಂತರ ಅಪರಾಹ್ನ 3 ಗಂಟೆಗೆ ತೆರೆದು ರಾತ್ರಿ 10 ಗಂಟೆಗೆ ಮುಚ್ಚಲಾಗುವುದು.
ಡಿಸೆಂಬರ್ 26ರಂದು ಶ್ರೀ ಅಯ್ಯಪ್ಪ ದೇವರ ವಿಗ್ರಹಕ್ಕೆ ಚಿನ್ನದಂಗಿ (ತಂಗಅಂಗಿ)ತೊಡಿಸಿ ದೀಪಾರಾಧನೆ ನಡೆಯಲಿದೆ. 27ರಂದು ರಾತ್ರಿ ಮಂಡಲಪೂಜೆ ನಡೆದ ನಂತರ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಮಂಡಲ ಪೂಜಾ ತೀರ್ಥಾಟನೆ ಕೊನೆಗೊಳ್ಳಲಿದೆ.
ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರದ ಬಾಗಿಲು ಮತ್ತೆ ತೆರೆಯುವ ಮೂಲಕ ಮಕರಜ್ಯೋತಿ ತೀರ್ಥಾಟನೆ ಆರಂಭಗೊಳ್ಳಲಿದೆ. ಜನವರಿ 14ರಂದು ಮಕರಜ್ಯೋತಿ ಪೂಜೆ ನಡೆಯಲಿದೆ. ಜನವರಿ 19ರ ತನಕ ಭಕ್ತರು ದೇವರ ದರ್ಶನ ನಡೆಸಬಹುದು. 20ರಂದು ಪಂದಳಂ ಅರಮನೆಯ ರಾಜಪ್ರತಿನಿಧಿ ಕ್ಷೇತ್ರ ದರ್ಶನ ನಡೆಸುವ ಮೂಲಕ ತೀರ್ಥಾಟನೆ ಕೊನೆಗೊಳ್ಳಲಿದೆ.






