ಕಾಸರಗೋಡು: ಈ ಕಾಡಿನಲ್ಲಿ ಹುಲಿ ಅಥವಾ ಚಿರತೆ ಇಲ್ಲ. ಆದರೆ ಈ ಚಿತ್ರವನ್ನು ಕಂಡರೆ ಇಲ್ಲಿ ಯಾವುದೋ ವನ್ಯ ಮೃಗ ಇದೆಯೆಂದು ಭಯವುಂಟಾಗಬಹುದು. ಕಾಸರಗೋಡು ಕಲೆಕ್ಟರೇಟ್ ಕಟ್ಟಡದ ಹಿಂಭಾಗದಲ್ಲಿ ಇಂತಹ ಭೀತಿ ಹುಟ್ಟಿಸುವ ದೃಶ್ಯವಿದೆ. ಅದಕ್ಕೆ ಹೊಂದಿಕೊಂಡು ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಕಚೇರಿ ಕಾರ್ಯಾ ಚರಿಸುತ್ತಿದೆ. ಈ ಪ್ರದೇಶದಲ್ಲಿ ಕಾಡು ಪೊದೆಗಳು ಬೆಳೆದಿವೆ. ಈ ಕಾಡಿನೊಳಗೆ ಒಂದು ಟಿಪ್ಪರ್ ಲಾರಿಯನ್ನು ಕಾಣ ಬಹುದಾಗಿತ್ತು. ಲಾರಿಯಲ್ಲಿದ್ದ ಹೊಯ್ಗೆ ಈಗಲೂ ಇದೆ. ದಶಕಗಳ ಕಾಲ ಲಾರಿಯಲ್ಲಿದ್ದ ಹೊಯ್ಗೆ ಮೇಲೆ ಕಾಡು ತುಂಬಿಕೊಂಡಿತ್ತು. ಲಾರಿಯ ಮುಂ ಭಾಗದ ಇಂಜಿನ್ ಸಹಿತ ಬೆಲೆಬಾಳುವ ಸಾಮಗ್ರಿಗಳನ್ನು ಅಗತ್ಯವುಳ್ಳವರು ಕಳಚಿ ಕೊಂಡೊಯ್ದಿದ್ದಾರೆ. ಕಬ್ಬಿಣದ ಶೀಟುಗಳು ಹಾಗೂ ಮರದ ಹಲಗೆಗಳು ಮಾತ್ರ ಈಗ ಬಾಕಿ ಉಳಿದಿದ್ದು, ಇವು ಭೀತಿ ಹುಟ್ಟಿಸುತ್ತಿವೆ. ಸರಕಾರ ಹಾಗೂ ಸರಕಾರದ ಕಾನೂನುಕ್ರಮಗಳು ಎತ್ತ ಸಾಗುತ್ತಿವೆಯೆಂಬುದನ್ನು ಈ ಸರಕಾರಿ ಕಚೇರಿ ಬಳಿಯಿರುವ ದೃಶ್ಯ ಸಾಬೀತು ಪಡಿಸುತ್ತಿದೆ. ಸರಕಾರಿ ನೌಕರರು ಮನಸ್ಸು ಮಾಡಿದರೆ ಇವುಗಳಿಗೆಲ್ಲಾ ಪರಿಹಾರ ಕಾಣಬಹುದಲ್ಲವೇ ಎಂದು ವಿವಿಧ ಅಗತ್ಯಗಳಿಗೆ ಜಿಲ್ಲಾಡಳಿತ ಕೇಂದ್ರಕ್ಕೆ ತಲುಪುವವರು ಭಾವಿಸುತ್ತಾರೆ. ಆದರೆ ಅದಕ್ಕೆ ಸಂಬಂಧಪಟ್ಟವರ ಭಾಗದಿಂದ ಕ್ರಮವುಂಟಾಗುತ್ತಿಲ್ಲ. ಅನಧಿಕೃತವಾಗಿ ಹೊಯ್ಗೆ ಸಾಗಾಟ ನಡೆಸಿದ ವೇಳೆ ವಶಪಡಿಸಿದ ವಾಹನ ಇದಾಗಿದೆ ಎಂದು ನೋಡಿದವರಿಗೆ ತಿಳಿಯಬಹುದು. ಅನಧಿಕೃತವಾಗಿ ಹೊಯ್ಗೆ ಸಾಗಿಸುವ ವಾಹನಗಳನ್ನು ವಶಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾರಿಗೂ ತರ್ಕವಿಲ್ಲ. ಆದರೆ ದಶಕಗಳ ಕಾಲ ಯಾವುದೇ ಕ್ರಮ ಕೈಗೊಳ್ಳದೆ ಈ ರೀತಿ ಉಳಿದುಕೊಂಡಿ ರುವುದು ಜನರಿಗಾಗಿದೆಯೇ ಅಥವಾ ನೌಕರರಿಗಾಗಿದೆಯೇ ಅಥವಾ ಸರಕಾರಕ್ಕಾಗಿದೆಯೇ ಎಂಬ ಆತಂಕದತ್ತ ಸರಕಾರಿ ಕಚೇರಿಗಳ ಚಟುವಟಿಕೆ ಸಾಗುತ್ತಿದೆ. ಈ ಕ್ರಮಗಳನ್ನು ಪೂರ್ತಿಗೊಳಿಸಬೇಕಾದವರು ಯಾರು? ಸಮಯಕ್ಕೆ ಸರಿಯಾಗಿ ಕ್ರಮ ಪೂರ್ತಿಗೊಳಿಸದಿದ್ದಲ್ಲಿ ಅದಕ್ಕೆ ಕಾರಣ ಪತ್ತೆಹಚ್ಚಲು ಅಡ್ಡಿಯೇನು ಎಂದು ತಿಳಿಯಬೇಕಾಗಿದೆ.
ಇನ್ನು ದಶಕಗಳ ಬಳಿಕ ಕ್ರಮವುಂಟಾದರೆ ಆ ಲಾರಿಯ ಮಾಲಕ ಜೀವಂತವಿದ್ದಾರೆಂದು ನೌಕರರಿಗೆ ಏನು ಖಚಿತ? ಅಥವಾ ಜೀವಿಸಿದ್ದರೆ ಕ್ರಮ ಕೈಗೊಂಡು ಲಾರಿಯನ್ನು ಮರಳಿ ಕೇಳಿದರೆ ಕಾನೂನು ವ್ಯವಸ್ಥೆಗಳು ಅವರಿಗೆ ಏನನ್ನು ಮರಳಿ ನೀಡಲಿದೆ? ಕಲೆಕ್ಟರೇಟ್ ಕಂಪೌಂಡ್‌ನಲ್ಲಿ ಈ ರೀತಿಯಲ್ಲಿ ಒಂದಲ್ಲ ಹಲವು ವಾಹನಗಳು ಪಾಳು ಬಿದ್ದಿವೆ.






