ಬೋವಿಕ್ಕಾನ: ಬೋವಿಕ್ಕಾನ ಪೇಟೆಯಲ್ಲಿ ನೀರು ಕಟ್ಟಿ ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದಕ್ಕೆ ಪರಿಹಾರವಾಗಿ ನವೀಕರಣ ಕಾಮಗಾರಿಗಳು ಆರಂಭಗೊಂಡಿದ್ದು, ಮಳೆ ಬಿರುಸಾಗುವ ಮೊದಲೇ ಪೂರ್ತಿಗೊಳ್ಳುವ ಸಾಧ್ಯತೆ ಇದೆ. ಮುಳಿಯಾರು ಪಂಚಾಯತ್‌ನ ಪ್ರಧಾನ ಕೇಂದ್ರವಾದ ಬೋವಿಕ್ಕಾನ ಪೇಟೆಯಲ್ಲಿ ಸಣ್ಣ ಮಳೆ ಸುರಿದರೂ ಕಟ್ಟಿ ನಿಲ್ಲುವ ಮಳೆ ನೀರಿನಿಂದ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಸಂಕಷ್ಟವಾಗುತ್ತಿತ್ತು.
ಚೆರ್ಕಳ- ಜಾಲ್ಸೂರು ಅಂತಾ ರಾಜ್ಯ ಹೆದ್ದಾರಿಯ ಪ್ರಮುಖ ಪೇಟೆಗಳಲ್ಲೊಂದಾದ ಬೋವಿಕ್ಕಾನದಲ್ಲಿ ಮೂಲಭೂತ ಸೌಕರ್ಯಗಳ ಸಹಿತದ ಪರಿಮಿತಿಗಳಿಂದ ಪೇಟೆಯಲ್ಲಿ ತೊಂದರೆ ಸೃಷ್ಟಿಯಾಗಿತ್ತು. ಈಗ ೮೫ ಲಕ್ಷ ರೂ. ವೆಚ್ಚದಲ್ಲಿ ಮೋರಿಸಂಕ ನಿರ್ಮಾಣ ನಡೆಯುತ್ತಿದೆ. ರಸ್ತೆ ಬದಿಯಲ್ಲಿ ಚರಂಡಿಗಳು ಇಲ್ಲದಿರುವುದೇ ರಸ್ತೆಯಲ್ಲೇ ನೀರು ಕಟ್ಟಿ ನಿಲ್ಲಲು ಕಾರಣವಾಗಿ ರುವುದು. ಇದ್ದ ಚರಂಡಿಯಲ್ಲಿ ಕಸ ಕಡ್ಡಿಗಳು, ಕೆಸರು ಮಣ್ಣು ತುಂಬಿ ನೀರು ಹರಿಯದಂತ ಸ್ಥಿತಿ ನಿರ್ಮಾಣವಾಗಿತ್ತು. ಕಾಲುದಾರಿ ಇಲ್ಲದೆ ಶಾಲಾ ಮಕ್ಕಳು ಸಹಿತ ಪ್ರಯಾಣಿಕರಿಗೆ ತೊಂದರೆ ಯಾಗಿತ್ತು. 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ನವೀಕರಣ ಕಾಮ ಗಾರಿಗಳಲ್ಲಿ ಮಳೆ ನೀರು ಹರಿದು ಹೋ ಗಲು ಮೋರಿಸಂಕ, ರಸ್ತೆಯ ಇಕ್ಕಡೆ ಗಳಲ್ಲೂ ಚರಂಡಿ, ಕಾಲುದಾರಿಯನ್ನು ನಿರ್ಮಿಸಲಾಗುವುದು. ಪಂಚಾಯತ್ ಕಚೇರಿ ರಸ್ತೆಯಿಂದ ಆರಂಭಿಸಿ ಭಜನಾ ಮಂದಿರದವರೆಗಿರುವ 440 ಮೀಟರ್, ಆಚೆಕಡೆಯ 200 ಮೀಟರ್‌ನಷ್ಟು ಚರಂಡಿ ನಿರ್ಮಿಸಲಾಗುವುದು. ಜಲ ಪ್ರಾಧಿಕಾರದ ಪೈಪ್‌ಗಳು ಸಾಗುತ್ತಿರುವ ಕಾರಣ ಬೋವಿಕ್ಕಾನ ಪೇಟೆಯ ಹಳೆಯ ಮೋರಿ ಸಂಕವನ್ನು ಮುರಿದು ತೆಗೆಯುವುದನ್ನು ಹೊರತುಪಡಿಸಲಾಗಿದೆ. ವಿಲ್ಲೇಜ್ ಕಚೇರಿಯಿಂದ ಆರಂಭಿಸಿ ಪಂಚಾಯತ್ ಕಚೇರಿವರೆಗಿರುವ ಭಾಗದಲ್ಲಿ ಸುರಕ್ಷಾ ಬೇಲಿ ನಿರ್ಮಾಣವು ನಡೆಯಲಿದೆ.






