ಪ್ರಧಾನಮಂತ್ರಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನ

ತಿರುವನಂತಪುರ: ಕೇಂದ್ರ ಸರಕಾರದ ಆರ್ಥಿಕ ನೆರವಿನೊಂದಿಗೆ ಕೇರಳದಲ್ಲಿ  ಜ್ಯಾರಿಗೊಳಿಸಿರುವ ಒಟ್ಟು 10,800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಅಪರಾಹ್ನ ನೆರವೇರಿಸಲಿರುವಂತೆಯೇ ಆ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ತಲಪ್ಪಾಡಿ-ಚೆಂಗಳ ಹಾಗೂ ಕಲ್ಲಿಕೋಟೆ ಬೈಪಾಸ್ ವೆಂಙಳಂ-ರಾಮನಾಟ್ಟುಕರೆ ತನಕದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯ ಉದ್ಘಾಟನೆ,  ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಕಾರ ಕೇರಳದಲ್ಲಿ ನಿರ್ಮಿಸಲಾಗಿರುವ 23 ರಸ್ತೆಗಳ ಉದ್ಘಾಟನೆ, ಅಮೃತ್ ಭಾರತ್ ಸ್ಟೇಶನ್ ಯೋಜನೆ ಪ್ರಕಾರ ಶೊರ್ನೂರು ಜಂಕ್ಷನ್, ಕುಟ್ಟಿಪ್ಪುರಂ ಮತ್ತು ಚೆಂಗನಾಶ್ಶೇರಿ ರೈಲು ನಿಲ್ದಾಣ ನವೀಕರಣೆಯ  ಉದ್ಘಾಟನೆ ಹಾಗೂ ಶೊರ್ನೂರು ನಿಲಾಂಬೂರು ರಸ್ತೆಯ ರೈಲು ಹಾದಿಯ ವಿದ್ಯುತ್ತೀಕರಣ ಯೋಜನೆಯ ಲೋಕಾರ್ಪಣೆಯನ್ನು ಪ್ರಧಾನಮಂತ್ರಿ ಇಂದು ಅಪರಾಹ್ನ ನಿರ್ವಹಿಸಲಿದ್ದಾರೆ. ಆದರೆ ಈ ಯೋಜನೆಗಳ ಉದ್ಘಾಟನಾ ಸಮಾರಂಭಗಳಿಗೆ  ಕೇರಳ ಲೋಕೋಪಯೋಗಿ ಖಾತೆ ಸಚಿವ ಪಿ.ಎ. ಮುಹಮ್ಮದ್ ರಿಯಾಸ್‌ರಿಗೆ ಆಹ್ವಾನ ನೀಡಲಾಗಿಲ್ಲ. ಆದರೆ ಮುಖ್ಯಮಂತ್ರಿ ಮತ್ತು ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್‌ರಿಗೆ ಆಹ್ವಾನ ನೀಡಲಾಗಿದೆ.  ಕೇರಳದಲ್ಲಿ ಜ್ಯಾರಿಗೊಳಿಸಲಾದ ಈ ವಿವಿಧ ಯೋಜನೆಗಳಿಗೆ ಅಗತ್ಯದ ಭೂ ಸ್ವಾಧೀನ ಕ್ರಮ ಸೇರಿದಂತೆ ಅದರಲ್ಲಿ ನಿರ್ಣಾಯಕ ಪಾಲುದಾರಿಕೆ ವಹಿಸಿರುವ ಸಚಿವ ಮುಹಮ್ಮದ್ ರಿಯಾಸ್‌ರಿಗೆ  ಆಹ್ವಾನ ನೀಡದಿರುವುದರ ಹಿಂದೆ ರಾಜಕೀಯ ಉದ್ದೇಶ ಅಡಗಿದೆಯೆಂದು  ರಾಜ್ಯ ಸರಕಾರ ಆರೋಪಿಸಿದೆ. ಇದರಿಂದಾಗಿ ಮುಖ್ಯಮಂತ್ರಿಯವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸದೆ ಬಹಿಷ್ಕರಿಸುವ  ತೀರ್ಮಾನ ಕೈಗೊಂಡಿದ್ದಾರೆ. ಮಾತ್ರವಲ್ಲ ನಾನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಸಚಿವ ಎಂ.ಬಿ. ರಾಜೇಶ್ ಕೂಡಾ ಇನ್ನೊಂದೆಡೆ ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್‌ಗೆ ಆಹ್ವಾನ ನೀಡಲಾಗಿದೆ. ಆದರೆ ನನಗೆ  ಆಹ್ವಾನ ನೀಡದಿರುವ ನಿಲುವು ಪ್ರಜಾಪ್ರಭುತ್ವಕ್ಕೆ ಭೂಷಣವಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಕೇರಳ ಸರಕಾರವೂ 5600 ಕೋಟಿ  ರೂ.ವ್ಯಯಿಸಿದೆ ಎಂಬುವುದನ್ನು ಕೇಂದ್ರ ಸರಕಾರ ಮನವರಿಕೆ ಮಾಡಿಕೊಳ್ಳಬೇಕಾಗಿತ್ತೆಂದೂ ಅವರು ಹೇಳಿದ್ದಾರೆ.

You cannot copy contents of this page