ಸೀತಾಂಗೋಳಿ: ಬೇಳ ಹಾಗೂ ಪರಿಸರ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಬೀದಿನಾಯಿಯೊಂದು ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಕಿಳಿಂಗಾರು ಕಟ್ಟತ್ತಂಗಡಿ, ಬೇಳ ಪರಿಸರ ನಿವಾಸಿಗಳಾದ ೮ ಮಂದಿ ನಾಯಿಯ ಕಡಿತದಿಂದ ಗಾಯಗೊಂಡಿದ್ದಾರೆ. ಕಯ್ಯಾರು ಶಾಲಾ ಅಧ್ಯಾಪಕ ಸಿರಿಲ್ ಕ್ರಾಸ್ತಾ (50), ಬದಿಯಡ್ಕ ಶಾಲಾ ಅಧ್ಯಾಪಕ ಸ್ಟೀವನ್ (40), ಶೆಬಿ (45), ಪ್ರಸನ್ನ (45), ಮೇರಿ (60), ಸರಿತ (24), ವಿದ್ಯಾರ್ಥಿಗಳಾದ ಅನ್ವೀನ್ (13), ಅಜಿತ್ (8) ಎಂಬಿವರು ನಾಯಿಯ ಕಡಿತದಿಂದ ಗಾಯಗೊಂಡು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಿನ್ನೆ ರಾತ್ರಿ ಸುಮಾರು 8 ಗಂಟೆ ವೇಳೆ ನಡೆದು ಹೋಗುತ್ತಿದ್ದ ಹಾಗೂ ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ನಾಯಿ ದಾಳಿ ನಡೆಸಿದೆ. ಅಲ್ಲದೆ ಆ ಪರಿಸರದಲ್ಲಿದ್ದ ಜಾನು ವಾರುಗಳು, ಬೀದಿನಾಯಿಗಳು, ಬೆಕ್ಕುಗಳಿಗೂ ನಾಯಿ ಕಚ್ಚಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕಚ್ಚಿ ಗಾಯಗೊಳಿಸಿದ ನಾಯಿಗೆ ಹುಚ್ಚು ಹಿಡಿದಿರಬಹುದೇ ಎಂದು ಸಂಶಯಿಸಲಾಗುತ್ತಿದೆ. ಬಳಿಕ ಅದನ್ನು ಊರವರು ಹೊಡೆದು ಕೊಂದಿದ್ದಾರೆ.







